ಡಿಟಿಎಚ್ ಚಂದಾದಾರನ್ನು ಹೊಂದಿರುವ ಟಾಟಾ ಸ್ಕೈ ಇದೀಗ 18 ವರ್ಷಗಳ ಬಳಿಕ ತನ್ನ ಹೆಸರು ಮತ್ತು ಉದ್ಯಮದ ಮಾದರಿಯನ್ನು ಬದಲಾಯಿಸಿಕೊಂಡಿದೆ. ಹೌದು ದೇಶದ ಪ್ರಮುಖ ಡಿಟಿಎಚ್ ಸೇವಾದಾರ ಕಂಪನಿ ಟಾಟಾ ಸ್ಕೈ ಇದೀಗ ಹೆಸರು ಬದಲಾಯಿಸಿಕೊಂಡಿದ್ದು ಹೊಸದಾಗಿ ಟಾಟಾ ಪ್ಲೇ ಅಸ್ತಿತ್ವಕ್ಕೆ ಬಂದಿದೆ. ಇದರ ಜೊತೆಗೆ ಬಂಪರ್ ಆಫರ್ಗಳನ್ನೂ ಘೋಷಣೆ ಮಾಡಿದ್ದು ಟಾಟಾ ಪ್ಲೇ ಹೆಸರಿನಲ್ಲಿ OTT ಸೇವೆಗಳನ್ನು ಪರಿಚಯಿಸಿದೆ. ಟಾಟಾ ಪ್ಲೇ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್ಸ್ಟಾರ್ನಂತಹ 14 OTT ಸೇವೆಗಳನ್ನು ಸೇರಿಸಿದೆ. ನೆಟ್ಫ್ಲಿಕ್ಸ್ ಸೇರ್ಪಡೆಯೊಂದಿಗೆ ಹಿಂದಿನ 13 OTT ಸೇವೆಗಳಿಂದ ಈ ಸಂಖ್ಯೆ 14ಕ್ಕೆ ಏರಿದೆ.
ಇವುಗಳನ್ನು ತಮ್ಮ Binge+ಪ್ಯಾಕ್ಗಳಲ್ಲಿ ನೀಡುತ್ತಿದೆ. ಈ ಮೂಲಕ ಗ್ರಾಹಕರು ಬಯಸುವ ರೀತಿಯಲ್ಲಿ ಒಟಿಟಿ ಸೇವೆಗಳ ಸಹಿತ ವಿವಿಧ ಪ್ಯಾಕೇಜ್ಗಳು ದೊರೆಯಲಿದೆ. ಟಾಟಾ ಪ್ಲೇ ನೆಟ್ಫ್ಲಿಕ್ಸ್ ಕಾಂಬೊ ಪ್ಯಾಕ್ ದರ ತಿಂಗಳಿಗೆ ₹399 ರಿಂದ ಆರಂಭವಾಗಲಿದ್ದು ಜನವರಿ 27ರಿಂದಲೇ ಅಂದರೆ ಇಂದಿನಿಂದಲೇ ದೊರೆಯಲಿದೆ. ಹೀಗಾಗಿ ಟಾಟಾ ಪ್ಲೇ ಇನ್ನು ಮುಂದೆ ಡಿಟಿಎಚ್ (ಕೇಬಲ್ ಚಾನೆಲ್) ಸೇವೆಗಳ ಜೊತೆಗೆ ಒಟಿಟಿ ಸೇವೆಗಳನ್ನು ಸಹ ತನ್ನ ಗ್ರಾಹಕರಿಗೆ ನೀಡಲಿದೆ. ಈ ಬಗ್ಗೆ ಟಾಟಾ ಪ್ಲೇನ ಸಿಇಓ ಹರಿತ್ ನಾಗ್ಪಾಲ್ ಮಾತನಾಡಿದ್ದು ನಮ್ಮದು ಡಿಟಿಎಚ್ ಸಂಸ್ಥೆಯಾಗಿತ್ತು. ಆದರೆ ಇನ್ನು ಮುಂದೆ ನಾವು ಕಂಟೆಂಟ್ ವಿತರಣೆ ಮಾಡುವ ಸಂಸ್ಥೆಯಾಗಿ ಬದಲಾಗಲಿದ್ದೇವೆ.
ನಮ್ಮ ಗ್ರಾಹಕರ ವರ್ಗ ಕಂಟೆಂಟ್ ಅನ್ನು ನೋಡುವ ರೀತಿಯಲ್ಲಿ ಬದಲಾವಣೆ ಮಾಡಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ. ಹಾಗಾಗಿ ಅವರ ಅಗತ್ಯಕ್ಕೆ ತಕ್ಕಂತೆ ನಾವು ನಮ್ಮ ಸೇವೆಯನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಟಾಟಾ ಪ್ಲೇ ಅಸ್ತಿತ್ವದಲ್ಲಿರುವ 175 ರೂ. ವಿನ ಭೇಟಿ ಶುಲ್ಕವನ್ನು ಮನ್ನಾ ಮಾಡಿದೆ. ರೀಚಾರ್ಜ್ ಮಾಡದ DTH ಗ್ರಾಹಕರಿಗೆ ಮರುಸಂಪರ್ಕಗಳು ಉಚಿತ ನೀಡುತ್ತಿದೆ.
ಗ್ರಾಹಕರು ಟಾಟಾ ಪ್ಲೇ ಕಾಂಬೋ ಪ್ಯಾಕ್ ಅನ್ನು ಕಸ್ಟಮೈಸ್ ಮಾಡಬಹುದು. ಮನೆಯಲ್ಲಿರುವ ಎಲ್ಲಾ ಕುಟುಂಬ ಸದಸ್ಯರು ಒಂದೇ ಪ್ಯಾಕ್ ಅನ್ನು ತೆಗೆದುಕೊಳ್ಳಬಹುದು. ಒಂದೇ ಪ್ಯಾಕ್ನೊಂದಿಗೆ ಸ್ಮಾರ್ಟ್ ಟಿವಿಯಿಂದ ಮೊಬೈಲ್ ಫೋನ್ವರೆಗೆ ಎಲ್ಲಿ ಬೇಕಾದರೂ ವಿಷಯವನ್ನು ವೀಕ್ಷಿಸಬಹುದು. ಆದಾಗ್ಯೂ ನೀವು ಹೆಚ್ಚಿನ ಪರದೆಗಳನ್ನು ಬಯಸಿದರೆ ಹೆಚ್ಚು ಪಾವತಿಸಬೇಕಾಗುತ್ತದೆ. ಟಾಟಾ ಪ್ಲೇ ಎಂಬುದು ಟಾಟಾ ಸನ್ಸ್ ಮತ್ತು ವಾಲ್ಟ್ ಡಿಸ್ನಿ ಕಂಪನಿಯ ಜಂಟಿ ಉದ್ಯಮವಾಗಿದೆ. ಇದು ವರ್ಷಗಳಲ್ಲಿ ಭಾರತದಲ್ಲಿ 23 ಮಿಲಿಯನ್ ಕುಟುಂಬಗಳಿಗೆ ವಿಸ್ತರಿಸಿದೆ.