NEET (UG) 2026 ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ (Telegram) ಮೆಸೇಜಿಂಗ್ ಆಪ್ ಅನ್ನು ಒಂದು ವಾರದ ಅವಧಿಗೆ ತಾತ್ಕಾಲಿಕವಾಗಿ ನಿರ್ಬಂಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿದ ಮನವಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು ಜೂನ್ 22, 2026 ರ ವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ ಎಂದು ಹೇಳಲಾಗಿದೆ. NTA ಪ್ರಕಾರ ಜೂನ್ 21ರಂದು ನಡೆಯಲಿರುವ NEET (UG) 2026 ಮರುಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ವಂಚಿಸಲು ಕೆಲವು ವಂಚನಾ ಜಾಲಗಳು ಟೆಲಿಗ್ರಾಮ್ ವೇದಿಕೆಯನ್ನು ಸಂಘಟಿತವಾಗಿ ಬಳಸುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಯ ಪಾವಿತ್ರ್ಯತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
Also Read : 50MP ಸೆಲ್ಫಿ ಕ್ಯಾಮೆರಾ ಇರುವ Vivo V50 5G ಮೊಬೈಲ್ ಬೆಲೆಯಲ್ಲಿ ಭಾರೀ ಇಳಿಕೆ! ಫೀಚರ್ಸ್ ನೋಡಿ
ದೇಶದಲ್ಲಿ ಟೆಲಿಗ್ರಾಮ್ ಮೆಸೇಜಿಂಗ್ ಆಪ್ ಅನ್ನು ಒಂದು ವಾರದ ಅವಧಿಗೆ ತಾತ್ಕಾಲಿಕವಾಗಿ ನಿರ್ಬಂಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಜೊತೆಗೆ ಜೂನ್ 30 ರ ವರೆಗೆ ಭಾರತದಲ್ಲಿ ಪೋಸ್ಟ್ ಮಾಡಲಾದ ಮೆಸೆಜ್‌ಗಳಿಗೆ ‘ಮೆಸೇಜ್ ಎಡಿಟ್’ (Message Edit) ಫೀಚರ್ ಅನ್ನು ನಿಷ್ಕ್ರಿಯಗೊಳಿಸುವಂತೆ ಕೇಂದ್ರ ಸರ್ಕಾರ ಟೆಲಿಗ್ರಾಮ್‌ಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ. ಗಮನಾರ್ಹ ಸಂಗತಿಯೆಂದರೆ ಭಾರತದಲ್ಲಿ ಲಕ್ಷಾಂತರ ಬಳಕೆದಾರರನ್ನು ಹೊಂದಿರುವ ಇಂತಹ ದೊಡ್ಡ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಅನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಸೀಮಿತ ಅವಧಿಗೆ ನಿರ್ಬಂಧಿಸುತ್ತಿರುವುದು ಇದೇ ಮೊದಲ ಬಾರಿಗೆ ಎನ್ನಲಾಗಿದೆ.
ಇನ್ನು NTA ಮಾಹಿತಿ ಪ್ರಕಾರ, ಇತ್ತೀಚಿನ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳ ವೇಳೆ ಈ ಫೀಚರ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಪರೀಕ್ಷೆ ಮುಗಿದ ಬಳಿಕ ಹಳೆಯ ಮೆಸೆಜ್‌ಗಳನ್ನು ಎಡಿಟ್ ಮಾಡಿ, ಪ್ರಶ್ನೆಪತ್ರಿಕೆ ಮೊದಲೇ ಸೋರಿಕೆಯಾಗಿತ್ತು ಎಂಬಂತೆ ನಕಲಿ ಪುರಾವೆಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆದಿರುವುದು ಗಮನಕ್ಕೆ ಬಂದಿದೆ. ಇದರಿಂದ ಪರೀಕ್ಷೆಯ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಂಸ್ಥೆ ತಿಳಿಸಿದೆ.
ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಾಗೂ NEET (UG) 2026 ಮರುಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ವಂಚಿಸಲು ಕೆಲವು ಮೋಸದ ಜಾಲಗಳು ಟೆಲಿಗ್ರಾಮ್ ಪ್ಲಾಟ್‌ಫಾರ್ಮ್ ಅನ್ನು ಸಂಘಟಿತವಾಗಿ ಬಳಸುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು NTA ಸ್ಪಷ್ಟಪಡಿಸಿದೆ.