Google Pixel 11 Series launch date announced and google sending invites
ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಬಹುನಿರೀಕ್ಷಿತ ಮೆಡ್ ಬೈ ಗೂಗಲ್ (Made by Google) ಕಾರ್ಯಕ್ರಮದ ದಿನಾಂಕವನ್ನು ಇದೀಗ ಅಧಿಕೃತವಾಗಿ ಘೋಷಿಸಿದೆ. ಈ ಕಾರ್ಯಕ್ರಮದಲ್ಲಿ ಕಂಪನಿಯ ಮುಂದಿನ ತಲೆಮಾರಿನ Google Pixel 11 ಸ್ಮಾರ್ಟ್‌ಫೋನ್ ಸರಣಿ ಸೇರಿದಂತೆ ಹಲವು ಹೊಸ ಉತ್ಪನ್ನಗಳು ಅನಾವರಣಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಗೂಗಲ್ ಮಾಧ್ಯಮಗಳಿಗೆ ಆಹ್ವಾನ ಪತ್ರಿಕೆಗಳನ್ನು ಕಳುಹಿಸಲು ಆರಂಭಿಸಿದ್ದು, ಅದರಲ್ಲಿ Next Generation Pixel ಎಂಬ ಉಲ್ಲೇಖವಿದೆ. ಇದರೊಂದಿಗೆ ಗೂಗಲ್‌ನ ಸಿಗ್ನೇಚರ್ ಹಾರಿಜಾಂಟಲ್ ಕ್ಯಾಮೆರಾ ಬಾರ್ ಹೊಂದಿರುವ ಗೋಲ್ಡ್ ಕಲರ್ ಸ್ಮಾರ್ಟ್‌ಫೋನ್‌ನ ಟೀಸರ್ ಫೋಟೋವನ್ನು ಸಹ ಹಂಚಿಕೊಂಡಿದೆ. ಹಾಗಾದರೆ ಮುಂಬರುವ ಗೂಗಲ್ ಪಿಕ್ಸಲ್ 11 ಸರಣಿಯ ಫೋನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Samsung Galaxy Unpacked 2026 ಕಾರ್ಯಕ್ರಮಕ್ಕೆ ಮುಹೂರ್ತ ಫೀಕ್ಸ್! ಏನನ್ನು ನಿರೀಕ್ಷಿಸಬಹುದು?
ಮೆಡ್ ಬೈ ಗೂಗಲ್ 2026 ಕಾರ್ಯಕ್ರಮವು ಇದೇ ಆಗಸ್ಟ್ 12 ರಂದು ಸಂಜೆ 6:00 ಗಂಟೆಗೆ (ET) ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ಈ ಕಾರ್ಯಕ್ರಮ ಆಗಸ್ಟ್ 13 ರಂದು ಬೆಳಿಗ್ಗೆ 3:30 ಕ್ಕೆ ವೀಕ್ಷಿಸಬಹುದಾಗಿದೆ. ಆಸಕ್ತ ಗ್ರಾಹಕರು ಈ ಕಾರ್ಯಕ್ರಮದ ನೇರಪ್ರಸಾರವನ್ನು ಗೂಗಲ್ ಕಂಪನಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ವೀಕ್ಷಿಸಲು ಅವಕಾಶವಿರಲಿದೆ.
ಈ ವರ್ಷದ ಈ ಕಾರ್ಯಕ್ರಮದಲ್ಲಿ ಗೂಗಲ್ ಪಿಕ್ಸಲ್ 11 ಸರಣಿ ಪ್ರಮುಖ ಆಕರ್ಷಣೆಯಾಗಲಿದೆ. ವರದಿಗಳ ಪ್ರಕಾರ ಈ ಸರಣಿಯಲ್ಲಿ ಗೂಗಲ್ ಪಿಕ್ಸಲ್ 11, ಗೂಗಲ್ ಪಿಕ್ಸಲ್ 11 ಪ್ರೊ, ಗೂಗಲ್ ಪಿಕ್ಸಲ್ 11 ಪ್ರೊ XL ಮತ್ತು ಗೂಗಲ್ ಪಿಕ್ಸಲ್ 11 ಪ್ರೊ ಫೋಲ್ಡ್ ಮೊಬೈಲ್‌ಗಳು ಸೇರಿ ನಾಲ್ಕು ಮಾದರಿಗಳು ಬಿಡುಗಡೆಯಾಗುವ ಸಾಧ್ಯತೆಯಿದೆ. ಎಲ್ಲಾ ಫೋನ್‌ಗಳು ಹೊಸ Tensor G6 ಚಿಪ್‌ಸೆಟ್ ಮತ್ತು MediaTek M90 ಮೋಡೆಮ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎನ್ನಲಾಗಿದೆ. ಇದರ ಜೊತೆಗೆ ಹೊಸ Pixel Glow ನೋಟಿಫೀಕೇಶನ್ ಫೀಚರ್ ಅನ್ನು ಸಹ ಗೂಗಲ್ ಪರಿಚಯಿಸಬಹುದು ಎಂಬ ಸೂಚನೆಗಳು ಇವೆ.
ಹಾಗೆಯೇ ಪಿಕ್ಸಲ್ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಪಿಕ್ಸಲ್ ವಾಚ್ 5 ಸ್ಮಾರ್ಟ್‌ವಾಚ್ ಕೂಡ ಇದೇ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳುವ ಸಾಧ್ಯತೆಯಿದೆ. ಇದರಿಂದ ಗೂಗಲ್ ತನ್ನ ಪಿಕ್ಸಲ್ ಪರಿಸರ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆಯಿದೆ. ಇನ್ನು ಈ ಫೋನ್‌ಗಳ ಬೆಲೆ ನೋಡುವುದಾದರೆ, ಪಿಕ್ಸಲ್ 11 ಸುಮಾರು 79,990 ರೂ.ಗಳಿಂದ ಆರಂಭವಾಗಬಹುದು ಎಂದು ವರದಿಗಳು ಸೂಚಿಸುತ್ತವೆ. ಹಾಗೆಯೇ ಪಿಕ್ಸಲ್ 11 ಪ್ರೊ ಬೆಲೆ 1,03,999 ರೂ.ಗಳು, ಪಿಕ್ಸಲ್ 11 ಪ್ರೊ XL ಬೆಲೆ ಸುಮಾರು 1,19,999 ರೂ.ಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಗೂಗಲ್ ಪಿಕ್ಸಲ್ 11 ಪ್ರೊ ಫೋಲ್ಡ್ ಬೆಲೆ ಸುಮಾರು 1,59,999 ರೂ.ಗಳು ಇರಬಹುದು ಎಂದು ಊಹಿಸಲಾಗಿದೆ.