Caller Names: ಅಪರಿಚಿತ ಕರೆಗಳನ್ನು ಗುರುತಿಸುವುದು ಇನ್ಮುಂದೆ ಸುಲಭ: ನವೆಂಬರ್ 1 ರಿಂದ ಹೊಸ ಸೇವೆ

ಅಪರಿಚಿತ ಮೊಬೈಲ್‌ ಸಂಖ್ಯೆಗಳಿಂದ ಕರೆ ಬಂದಾಗ ಅದನ್ನು ಸ್ವೀಕರಿಸಬೇಕೋ ಅಥವಾ ನಿರ್ಲಕ್ಷಿಸಬೇಕೋ ಎಂಬ ಗೊಂದಲ ಹಲವರಲ್ಲಿರುತ್ತದೆ. ಸ್ಪಾಮ್‌ ಕರೆಗಳು, ಆನ್‌ಲೈನ್‌ ವಂಚನೆ ಹಾಗೂ ಅನಗತ್ಯ ಕರೆಗಳ ಭಯದಿಂದ ಕೆಲವರು ಪರಿಚಯವಿಲ್ಲದ ನಂಬರ್‌ಗಳಿಂದ ಬರುವ ಕರೆಗಳನ್ನು ಸ್ವೀಕರಿಸುವುದೇ ಇಲ್ಲ. ಆದರೆ ಇನ್ನು ಮುಂದೆ ಇಂತಹ ಕರೆಗಳನ್ನು ಗುರುತಿಸುವುದು ಸುಲಭವಾಗಲಿದೆ. ಕರೆ ಮಾಡುವವರ ಹೆಸರನ್ನೂ (Caller Names) ಮೊಬೈಲ್‌ ಸ್ಕ್ರೀನ್‌ ಮೇಲೆ ಕಾಣಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Oppo Reno 16c ಖರೀದಿಗೆ ಮಾಡಲು ಇದುವೇ ಅತ್ಯುತ್ತಮ ಆಫರ್‌! 80W ಸೂಪರ್‌ವೂಕ್ ಚಾರ್ಜರ್

Caller Names: ನವೆಂಬರ್ 1 ರಿಂದ ಹೊಸ ವ್ಯವಸ್ಥೆ ಜಾರಿ

ಕರೆ ಮಾಡುವವರ ಹೆಸರು ಸ್ಕ್ರೀನ್ ಮೇಲೆ ಕಾಣಿಸುವ ಕಾಲಿಂಗ್ ನೇಮ್ ಪ್ರೆಸೆಂಟೇಷನ್ (CNAP) ವ್ಯವಸ್ಥೆಯನ್ನು ನವೆಂಬರ್ 1 ರಿಂದ ಜಾರಿಗೆ ತರಲು ದೂರಸಂಪರ್ಕ ಇಲಾಖೆ ಸೂಚನೆ ನೀಡಿದೆ. ಈಗ ಸಾಮಾನ್ಯವಾಗಿ ಮೊಬೈಲ್‌ಗೆ ಕರೆ ಬಂದಾಗ, ಆ ಸಂಖ್ಯೆ ಸಂಪರ್ಕ ಪಟ್ಟಿಯಲ್ಲಿ ಸೇವ್ ಆಗಿದ್ದರೆ ಮಾತ್ರ ನಾವು ಗುರುತಿಸಿರುವ ಹೆಸರನ್ನು ನೋಡಬಹುದು. ಆದರೆ, ಹೊಸ ವ್ಯವಸ್ಥೆ ಜಾರಿಯಾದ ಬಳಿಕ ಸಂಪರ್ಕ ಪಟ್ಟಿಯಲ್ಲಿ ಸೇವ್ ಮಾಡಿದರದ ಸಂಖ್ಯೆಯಿಂದ ಕರೆ ಬಂದರೂ, ಆ ಸಂಖ್ಯೆಗೆ ಸಂಬಂಧಿಸಿದ ಹೆಸರನ್ನು ಸ್ಕ್ರೀನ್‌ ಮೇಲೆ ನೋಡಲು ಸಾಧ್ಯವಾಗಲಿದೆ.

ಮೊಬೈಲ್‌ ನಂಬರ್‌ ಜೊತೆಗೆ ಹೆಸರು ಕೂಡ ಕಾಣಿಸಲಿದೆ

ಹೊಸ CNAP ವ್ಯವಸ್ಥೆಯಡಿ ಕರೆ ಮಾಡುವವರ ಹೆಸರನ್ನು ದೂರಸಂಪರ್ಕ ಕಂಪನಿಗಳ ದಾಖಲೆಗಳ ಆಧಾರದ ಮೇಲೆ ಪ್ರದರ್ಶಿಸಲಾಗುತ್ತದೆ. ಅಂದರೆ ಅಪರಿಚಿತ ದೇಶೀಯ ಮೊಬೈಲ್‌ ಸಂಖ್ಯೆಯಿಂದ ಕರೆ ಬಂದಾಗ ಕೇವಲ ನಂಬರ್‌ ಮಾತ್ರವಲ್ಲದೆ, ಕಂಪನಿಯ ದಾಖಲೆಗಳಲ್ಲಿ ಇರುವ ಹೆಸರೂ ಕಾಣಿಸಲಿದೆ. ಈ ಮೂಲಕ ಕರೆ ಸ್ವೀಕರಿಸುವ ಮುನ್ನವೇ ಕರೆ ಮಾಡುತ್ತಿರುವವರು ಯಾರು ಎಂಬುದನ್ನು ತಿಳಿದುಕೊಳ್ಳಲು ಗ್ರಾಹಕರಿಗೆ ನೆರವಾಗಲಿದೆ. ಇದರಿಂದ ಅಗತ್ಯ ಕರೆಗಳನ್ನು ಸ್ವೀಕರಿಸಲು ಹಾಗೂ ಅನಗತ್ಯ ಕರೆಗಳನ್ನು ನಿರ್ಲಕ್ಷಿಸಲು ಅನುಕೂಲವಾಗಬಹುದು.

ಪ್ರತ್ಯೇಕ ಆಪ್‌ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ

ಈ ಸೇವೆಯನ್ನು ಬಳಸಲು ಗ್ರಾಹಕರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಥವಾ ಯಾವುದೇ ಹೆಚ್ಚುವರಿ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ. ದೂರಸಂಪರ್ಕ ಕಂಪನಿಗಳ ಮೂಲಕವೇ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ಇಲಾಖೆಯ ನಿರ್ದೇಶನದ ಪ್ರಕಾರ, 4G ಮತ್ತು ಅದಕ್ಕಿಂತ ಮುಂದಿನ ತಂತ್ರಜ್ಞಾನ ಆಧಾರಿತ ಮೊಬೈಲ್‌ಗಳಲ್ಲಿ ಈ ಸೇವೆ ಜಾರಿಗೆ ಬರಲಿದೆ.

ಕರೆ ಮಾಡುವವರ ಹೆಸರು ಕಾಣಿಸುವುದರಿಂದ ಅಪರಿಚಿತ ಕರೆಗಳನ್ನು ಗುರುತಿಸಲು ಸುಲಭವಾಗಬಹುದು. ಸ್ಪಾಮ್‌ ಕರೆಗಳು ಹಾಗೂ ವಂಚನೆಗೆ ಸಂಬಂಧಿಸಿದ ಕೆಲವು ಅಪಾಯಗಳನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಬಹುದು. ಆದರೆ, ಹೆಸರು ಪ್ರದರ್ಶಿತವಾಗಿದೆ ಎಂಬ ಕಾರಣಕ್ಕೆ ಪ್ರತಿಯೊಂದು ಕರೆಯನ್ನೂ ನಂಬುವುದು ಸರಿಯಲ್ಲ. ಹೆಸರು ಅಥವಾ ಸಂಖ್ಯೆ ಪರಿಚಿತವಾಗಿ ಕಂಡರೂ, ಬ್ಯಾಂಕ್‌ ವಿವರಗಳು, ಒಟಿಪಿ (OTP), ಪಾಸ್‌ವರ್ಡ್‌ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅನುಮಾನಾಸ್ಪದ ಕರೆ ಬಂದರೆ ಎಚ್ಚರಿಕೆ ವಹಿಸುವುದು ಅಗತ್ಯ. ಈ ವ್ಯವಸ್ಥೆಯು ಅಪರಿಚಿತ ಕರೆಗಳನ್ನು ಗುರುತಿಸಲು ಗ್ರಾಹಕರಿಗೆ ನೆರವಾಗಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :