ದೇಶೀಯ ಮಾರುಕಟ್ಟೆಯಲ್ಲಿ Sony FX5 ಕ್ಯಾಮೆರಾ ಬಿಡುಗಡೆ: ಬೆಲೆ ಹಾಗೂ ಫೀಚರ್ಸ್‌ ನೋಡಿ

ದೇಶೀಯ ಮಾರುಕಟ್ಟೆಯಲ್ಲಿ Sony FX5 ಕ್ಯಾಮೆರಾ ಬಿಡುಗಡೆ: ಬೆಲೆ ಹಾಗೂ ಫೀಚರ್ಸ್‌ ನೋಡಿ

ಜನಪ್ರಿಯ ಸೋನಿ (Sony) ಕಂಪನಿಯು ತನ್ನ ಹೊಸ FX5 ಸಿನಿಮಾ ಲೈನ್ ಕ್ಯಾಮೆರಾವನ್ನು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಮಾಡಿದೆ. ವೃತ್ತಿಪರ ಸಿನಿಮಾ ನಿರ್ಮಾಪಕರು ಮತ್ತು ವಿಡಿಯೋಗ್ರಾಫರ್‌ಗಳನ್ನು ಗಮನದಲ್ಲಿಟ್ಟುಕೊಂಡು ಪರಿಚಯಿಸಿರುವ ಈ ಕ್ಯಾಮೆರಾ ಹಲವು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ. ಫುಲ್-ಫ್ರೇಮ್ Exmor RS CMOS ಸೆನ್ಸಾರ್ ಮತ್ತು BIONZ XR2 ಇಮೇಜ್ ಪ್ರೊಸೆಸಿಂಗ್ ಎಂಜಿನ್ ಇದರ ಪ್ರಮುಖ ಹೈಲೈಟ್ಸ್‌ ಆಗಿವೆ. ಹಾಗೆಯೇ ಕಂಪನಿಯ FX ಸರಣಿಯಲ್ಲಿ ಮೊದಲ ಬಾರಿಗೆ ಓಪನ್ ಗೇಟ್ (Open Gate) ಶೂಟಿಂಗ್ ಸೌಲಭ್ಯವನ್ನು ಪರಿಚಯಿಸಲಾಗಿದೆ. ಈ ಕ್ಯಾಮೆರಾದಲ್ಲಿ 60fps ವರೆಗೆ 5K ವಿಡಿಯೋ ರೆಕಾರ್ಡ್ ಮಾಡಬಹುದು. 15 ಸ್ಟಾಪ್‌ಗಳಿಗಿಂತ ಹೆಚ್ಚಿನ ಡೈನಾಮಿಕ್ ರೇಂಜ್, AI ಆಧಾರಿತ ಆಟೋಫೋಕಸ್ ಮತ್ತು ಐದು ಅಕ್ಷಗಳ ಇಮೇಜ್ ಸ್ಟೆಬಿಲೈಸೇಶನ್ ಕೂಡ ಇದರಲ್ಲಿವೆ. ಹಾಗಾದರೆ ಸೋನಿಯ ಈ ಹೊಸ ಕ್ಯಾಮೆರಾದ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Sony FX5 ಕ್ಯಾಮೆರಾದ ಬೆಲೆ ಮಾಹಿತಿ

ಭಾರತದಲ್ಲಿ ಸೋನಿ FX5 ಕ್ಯಾಮೆರಾದ ಆರಂಭಿಕ ಬೆಲೆ 5,09,990 ರೂ. ಆಗಿದೆ. XLR ಹ್ಯಾಂಡಲ್ ಯುನಿಟ್ ಒಳಗೊಂಡಿರುವ ಆವೃತ್ತಿಗೆ 5,61,990 ರೂ. ಬೆಲೆ ನಿಗದಿಪಡಿಸಲಾಗಿದೆ. ಇನ್ನು ಈ ಕ್ಯಾಮೆರಾ ಮತ್ತು ಅದರ ಪರಿಕರಗಳು ಸೋನಿ ಅಧಿಕೃತ ರೀಟೇಲ್‌ ಸ್ಟೋರ್‌ಗಳು, ಸೋನಿ ಕ್ಯಾಮೆರಾ ಲೌಂಜ್, ಆಲ್ಫಾ ಫ್ಲ್ಯಾಗ್‌ಶಿಪ್ ಸ್ಟೋರ್‌ಗಳು, ಸೋನಿ ಸೆಂಟರ್ ಹಾಗೂ ShopatSC ಮೂಲಕ ಖರೀದಿಗೆ ಲಭ್ಯ.

Sony FX5

ಸೋನಿ FX5 ಕ್ಯಾಮೆರಾದ ಫೀಚರ್ಸ್‌

ಸೋನಿ FX5 ಕ್ಯಾಮೆರಾದಲ್ಲಿ 35mm ಫುಲ್-ಫ್ರೇಮ್ Exmor RS CMOS ಸೆನ್ಸಾರ್ ನೀಡಲಾಗಿದೆ. ಹಾಗೆಯೇ ಮೀಸಲಾದ AI ಪ್ರೊಸೆಸಿಂಗ್ ಯುನಿಟ್ ಹೊಂದಿರುವ BIONZ XR2 ಇಮೇಜ್ ಪ್ರೊಸೆಸಿಂಗ್ ಎಂಜಿನ್ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಕ್ಯಾಮೆರಾದಲ್ಲಿ 800, 4,000 ಮತ್ತು 12,800 ಎಂಬ ಮೂರು ಬೇಸ್ ISO ಸೆಟ್ಟಿಂಗ್‌ಗಳಿವೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಗುಣಮಟ್ಟದ ದೃಶ್ಯಗಳನ್ನು ಸೆರೆಹಿಡಿಯಲು ಇದು ನೆರವಾಗುತ್ತದೆ. ವಿಡಿಯೋ ರೆಕಾರ್ಡಿಂಗ್ ವಿಚಾರದಲ್ಲಿ FX5 ಹಲವು ಆಯ್ಕೆಗಳನ್ನು ನೀಡುತ್ತದೆ. ಓಪನ್ ಗೇಟ್ ಶೂಟಿಂಗ್ ಮೂಲಕ ಸೆನ್ಸಾರ್‌ನ ಸಂಪೂರ್ಣ ಭಾಗವನ್ನು ಬಳಸಿಕೊಂಡು 3:2 ಫುಲ್-ಪಿಕ್ಸೆಲ್ ರೀಡ್‌ಔಟ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿಯಬಹುದು. ಈ ಕ್ಯಾಮೆರಾದಲ್ಲಿ 60fps ವರೆಗೆ 5K ವಿಡಿಯೋ, 120fps ವರೆಗೆ 4K ವಿಡಿಯೋ ಮತ್ತು 240fps ವರೆಗೆ Full-HD ವಿಡಿಯೋ ರೆಕಾರ್ಡ್ ಮಾಡಲು ಅವಕಾಶವಿದೆ.

ಇನ್ನು ಈ ಕ್ಯಾಮೆರಾವು XAVC HS ಮತ್ತು XAVC S ವಿಡಿಯೋ ಫಾರ್ಮ್ಯಾಟ್‌ಗಳನ್ನು ಸಪೋರ್ಟ್‌ ಮಾಡುತ್ತದೆ. ಇದರೊಂದಿಗೆ ಸೋನಿಯ 16-ಬಿಟ್ X-OCN RAW ಫಾರ್ಮ್ಯಾಟ್‌ನಲ್ಲಿ ಇಂಟರ್ನಲ್ ರೆಕಾರ್ಡಿಂಗ್ ಸೌಲಭ್ಯವನ್ನೂ ಹೊಂದಿದೆ. ದೃಶ್ಯಗಳನ್ನು ವೀಕ್ಷಿಸಲು ಮತ್ತು ಕ್ಯಾಮೆರಾ ಸೆಟ್ಟಿಂಗ್‌ಗಳನ್ನು ನಿರ್ವಹಿಸಲು 2.76 ಮಿಲಿಯನ್ ಡಾಟ್‌ಗಳ ರೆಸಲ್ಯೂಶನ್ ಹೊಂದಿರುವ 3.5 ಇಂಚಿನ ಮಲ್ಟಿ-ಆಂಗಲ್ ಟಚ್‌ಸ್ಕ್ರೀನ್ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 6, Bluetooth 5.3, HDMI, ಎರಡು USB Type-C ಪೋರ್ಟ್‌ಗಳು, ಮೈಕ್ರೊಫೋನ್ ಇನ್‌ಪುಟ್ ಮತ್ತು ಹೆಡ್‌ಫೋನ್ ಜ್ಯಾಕ್ ಸೇರಿವೆ.

Manthesh B

Manthesh B

Manthesh B ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

View full profile