Microsoft Outlook Down: ಜಾಗತಿಕವಾಗಿ ಸಾವಿರಾರು ಬಳಕೆದಾರರಿಗೆ ಇಮೇಲ್, ಟೀಮ್ಸ್ ಸೇವೆಯಲ್ಲಿ ವ್ಯತ್ಯಯ

Microsoft Down: ಮೈಕ್ರೋಸಾಫ್ಟ್‌ನ ಜನಪ್ರಿಯ ಇಮೇಲ್ ಸೇವೆಯಾದ ಔಟ್‌ಲುಕ್‌ನಲ್ಲಿ ಗುರುವಾರ ಪ್ರಮುಖ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಈ ದೋಷದಿಂದಾಗಿ ಹತ್ತಾರು ಸಾವಿರ ಬಳಕೆದಾರರಿಗೆ ತಮ್ಮ ಇಮೇಲ್ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗದೆ ತೊಂದರೆ ಅನುಭವಿಸಿದ್ದಾರೆ. ಸಮಸ್ಯೆಯನ್ನು ಸರಿಪಡಿಸಿ ಸೇವೆಯನ್ನು ಸಹಜ ಸ್ಥಿತಿಗೆ ತರಲು ಮೈಕ್ರೋಸಾಫ್ಟ್ ತಾಂತ್ರಿಕ ತಂಡ ಕಾರ್ಯನಿರ್ವಹಿಸುತ್ತಿದೆ.

ಆನ್‌ಲೈನ್‌ ಸೇವೆಗಳಲ್ಲಿನ ಅಡಚಣೆಗಳನ್ನು ಪತ್ತೆಹಚ್ಚುವ ಡೌನ್‌ಡೆಕ್ಟರ್ (Downdetector) ವೆಬ್‌ಸೈಟ್‌ನ ಮಾಹಿತಿ ಪ್ರಕಾರ ಅಮೆರಿಕದ ಪೂರ್ವ ಸಮಯ ಮಧ್ಯಾಹ್ನ 1 ಗಂಟೆಯ ನಂತರ ಔಟ್‌ಲುಕ್ ಬಳಕೆದಾರರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ದಾಖಲಾಗಿವೆ. ಭಾರತೀಯ ಕಾಲಮಾನ ಪ್ರಕಾರ ಇದು ರಾತ್ರಿ ಸುಮಾರು 11.30 ಗಂಟೆಯಾಗಿತ್ತು. ಈ ಸಮಯದಲ್ಲಿ ಸುಮಾರು 1.30 ಲಕ್ಷ ಬಳಕೆದಾರರು ಔಟ್‌ಲುಕ್ ಸೇವೆಗಳಲ್ಲಿ ಸಮಸ್ಯೆ ಎದುರಾಗಿರುವುದಾಗಿ ವರದಿ ಮಾಡಿದ್ದಾರೆ.

ನಂತರ ದೂರುಗಳ ಸಂಖ್ಯೆ ನಿಧಾನವಾಗಿ ಕಡಿಮೆಯಾಗತೊಡಗಿದೆ. ಅಮೆರಿಕದ ಪೂರ್ವ ಸಮಯ ಮಧ್ಯಾಹ್ನ 3 ಗಂಟೆಯ ವೇಳೆಗೆ, ಅಂದರೆ ಭಾರತೀಯ ಕಾಲಮಾನ ಪ್ರಕಾರ ಮರುದಿನ ಬೆಳಗಿನ ಜಾವ 1.30ರ ಸುಮಾರಿಗೆ, ಸುಮಾರು 60,000 ಬಳಕೆದಾರರು ಇನ್ನೂ ಸೇವಾ ಅಡಚಣೆ ಎದುರಿಸುತ್ತಿರುವುದಾಗಿ ವರದಿ ಮಾಡಿದ್ದಾರೆ.

ಮೈಕ್ರೋಸಾಫ್ಟ್ 365 ಸೇವೆಯ ಮೇಲೂ ಪರಿಣಾಮ ಆರಂಭದಲ್ಲಿ ಅಮೆರಿಕದ ಮುಖ್ಯ ಭೂಭಾಗದಲ್ಲಿ ಔಟ್‌ಲುಕ್ ಸೇವೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ದೂರುಗಳು ಬಂದಿರುವುದಾಗಿ ಮೈಕ್ರೋಸಾಫ್ಟ್ ತಿಳಿಸಿತ್ತು. ಬಳಿಕ ಈ ತಾಂತ್ರಿಕ ದೋಷವು ಜಾಗತಿಕವಾಗಿ ವಿವಿಧ ಪ್ರದೇಶಗಳಲ್ಲಿನ ಮೈಕ್ರೋಸಾಫ್ಟ್ 365 ಸೇವೆಗಳ ಸಂಪರ್ಕದ ಮೇಲೂ ಪರಿಣಾಮ ಬೀರಿರಬಹುದು ಎಂದು ಕಂಪನಿ ದೃಢಪಡಿಸಿದೆ.

ಮೈಕ್ರೋಸಾಫ್ಟ್ 365 ಎನ್ನುವುದು ಕಂಪನಿಯ ಕ್ಲೌಡ್ ಆಧಾರಿತ ಚಂದಾದಾರಿಕೆ ಸೇವೆಯಾಗಿದೆ. ಇದರಲ್ಲಿ ಔಟ್‌ಲುಕ್, ಮೈಕ್ರೋಸಾಫ್ಟ್ ಟೀಮ್ಸ್ ಸೇರಿದಂತೆ ಹಲವು ಅಪ್ಲಿಕೇಶನ್‌ಗಳು ಲಭ್ಯವಿವೆ. ಹೀಗಾಗಿ ಔಟ್‌ಲುಕ್‌ನಲ್ಲಿ ಕಾಣಿಸಿಕೊಂಡ ಈ ಸಮಸ್ಯೆಯು ಇಮೇಲ್ ಬಳಕೆದಾರರ ಜೊತೆಗೆ ಮೈಕ್ರೋಸಾಫ್ಟ್ 365 ಸೇವೆಗಳನ್ನು ಅವಲಂಬಿಸಿರುವ ಇತರ ಬಳಕೆದಾರರ ಮೇಲೂ ಪರಿಣಾಮ ಬೀರಿರುವ ಸಾಧ್ಯತೆಯಿದೆ.

Manthesh B

Manthesh B ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

View full profile