“No More 10 Minute Delivery”
10 Minutes Delivery: ಭಾರತದ ಆನ್‌ಲೈನ್ ಶಾಪಿಂಗ್ ಲೋಕದಲ್ಲಿ ಈಗ ದೊಡ್ಡ ಬದಲಾವಣೆಯ ಗಾಳಿ ಬೀಸುತ್ತಿದೆ. ಇಷ್ಟು ದಿನ ನಾವು ಆರ್ಡರ್ ಮಾಡಿದ 10 ನಿಮಿಷಕ್ಕೆ ಸಾಮಾನು ಮನೆಗೆ ಬರುತ್ತೆ ಎಂದು ಅಂದುಕೊಳ್ಳುತ್ತಿದ್ದೆವು. ಆದರೆ ಈಗ ಆ 10-ನಿಮಿಷಗಳ ಡೆಲಿವರಿ ಕಾಲ ಅಧಿಕೃತವಾಗಿ ಮುಕ್ತಾಯವಾಗುತ್ತಿದೆ. ಇಂದು ಅಂದರೆ 13ನೇ ಜನವರಿ 2026 ರಿಂದ ಕೇಂದ್ರ ಕಾರ್ಮಿಕ ಸಚಿವಾಲಯದ (Labour Ministry) ಸೂಚನೆಯ ಮೇರೆಗೆ ಬ್ಲಿಂಕಿಟ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮತ್ತು ಜೆಪ್ಟೊ ಕಂಪನಿಗಳು ತಮ್ಮ ಅಪ್ಲಿಕೇಶನ್ ಮತ್ತು ಜಾಹೀರಾತುಗಳಿಂದ ಈ 10 ನಿಮಿಷ ಎಂಬ ಹೆಸರನ್ನು ತೆಗೆದುಹಾಕಲು ಶುರು ಮಾಡಿವೆ. ಡೆಲಿವರಿ ಮಾಡುವ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಮತ್ತು ಅವರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.
ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಎಲ್. ಮಾಂಡವಿಯ (Mansukh L. Mandaviya) ಅವರು ಮಂಗಳವಾರ ಕಂಪನಿಗಳ ಮಾಲೀಕರೊಂದಿಗೆ ಒಂದು ಮುಖ್ಯವಾದ ಮೀಟಿಂಗ್ ನಡೆಸಿದರು. ಈ ಸಭೆಯಲ್ಲಿ ಸಾಮಾನುಗಳನ್ನು ಅತೀ ವೇಗವಾಗಿ ತಲುಪಿಸುವ ಧಾವಂತದಲ್ಲಿ ಡೆಲಿವರಿ ರೈಡರ್‌ಗಳ ಆರೋಗ್ಯ ಮತ್ತು ಜೀವಕ್ಕೆ ತೊಂದರೆಯಾಗುತ್ತಿದೆ ಎಂದು ಸರ್ಕಾರ ಕಳವಳ ವ್ಯಕ್ತಪಡಿಸಿತು. 10 ನಿಮಿಷದ ಗಡುವನ್ನು ಪೂರೈಸಲು ಸವಾರರು ಟ್ರಾಫಿಕ್ ಇರುವ ರಸ್ತೆಗಳಲ್ಲಿ ಅತಿ ವೇಗವಾಗಿ ಗಾಡಿ ಓಡಿಸಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಹಾಗಾಗಿ ಅಪ್ಲಿಕೇಶನ್‌ಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅಥವಾ ಬೇರೆ ಯಾವುದೇ ಜಾಹೀರಾತುಗಳಲ್ಲಿ 10 ನಿಮಿಷ ಎಂಬ ಟ್ಯಾಗ್ ಬಳಸಬಾರದು ಎಂದು ಸರ್ಕಾರ ಈ ಕಂಪನಿಗಳಿಗೆ ಬುದ್ಧಿ ಹೇಳಿದೆ.
ಸರ್ಕಾರ ಇಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಲು ಮುಖ್ಯ ಕಾರಣ ಕಳೆದ ಡಿಸೆಂಬರ್‌ನಲ್ಲಿ ನಡೆದ ದೊಡ್ಡ ಮಟ್ಟದ ಮುಷ್ಕರದ ಹಿನ್ನಲೆಯಲ್ಲಿ ಕಳೆದ ಎರಡು ವಾರದಗಳ ಹಿಂದೆ ನಡೆದ 2025 ಹೊಸ ವರ್ಷದ ಮುನ್ನಾದಿನದಂದು ದೇಶಾದ್ಯಂತ ಸುಮಾರು 2 ಲಕ್ಷಕ್ಕೂ ಹೆಚ್ಚು ಡೆಲಿವರಿ ಕೆಲಸಗಾರರು ತಮ್ಮ ಆ್ಯಪ್‌ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಕಾರ್ಮಿಕ ಸಂಘಟನೆಗಳು ಮತ್ತು ಸಂಸದ ರಾಘವ್ ಚಡ್ಡಾ ಅವರಂತಹ ನಾಯಕರು ಈ ಕಾರ್ಮಿಕರ ಪರವಾಗಿ ದನಿ ಎತ್ತಿದ್ದರು. ಕಂಪನಿಗಳು ಅಧಿಕೃತವಾಗಿ ದಂಡ ಹಾಕದಿದ್ದರೂ ಸಮಯಕ್ಕೆ ಸರಿಯಾಗಿ ಹೋಗದಿದ್ದರೆ ರೇಟಿಂಗ್ ಕಡಿಮೆ ಮಾಡುವುದು ಮತ್ತು ಇನ್ಸೆಂಟಿವ್ ಕಟ್ ಮಾಡುವುದರಿಂದ ಕೆಲಸಗಾರರ ಮೇಲೆ ಮಾನಸಿಕ ಒತ್ತಡ ಹೆಚ್ಚಾಗುತ್ತಿತ್ತು. ಇದನ್ನು ಹೋಗಲಾಡಿಸಲು ಈ 10-ನಿಮಿಷದ ನಿಯಮವನ್ನು ರದ್ದು ಮಾಡಲೇಬೇಕು ಎಂದು ಎಲ್ಲರೂ ಒತ್ತಾಯಿಸಿದ್ದರು.
ಈಗಾಗಲೇ ಬ್ಲಿಂಕಿಟ್ ಕಂಪನಿಯು ತನ್ನ ಜಾಹೀರಾತಿನ ವಾಕ್ಯವನ್ನು ಬದಲಾಯಿಸಿದೆ. ಮೊದಲು ಅದು “10 ನಿಮಿಷದಲ್ಲಿ ಸುಮಾರು 10,000 ಸಾಮಾನುಗಳು” ಎನ್ನುತ್ತಿತ್ತು. ಆದರೆ ಈಗ ನಿಮ್ಮ ಮನೆ ಬಾಗಿಲಿಗೆ 30,000 ಕ್ಕೂ ಹೆಚ್ಚು ಉತ್ಪನ್ನಗಳು ಎಂದು ಬದಲಿಸಿಕೊಂಡಿದೆ. ಅಂದರೆ ಕಂಪನಿಗಳು ಈಗ ಕೇವಲ ವೇಗಕ್ಕೆ ಮಹತ್ವ ಕೊಡುವುದನ್ನು ಬಿಟ್ಟು ಗ್ರಾಹಕರಿಗೆ ಹೆಚ್ಚಿನ ತರಹೇವಾರಿ ಸಾಮಾನುಗಳನ್ನು ಸರಿಯಾದ ರೀತಿಯಲ್ಲಿ ತಲುಪಿಸಲು ಮುಂದಾಗಿವೆ. ಜೆಪ್ಟೊ ಮತ್ತು ಇನ್‌ಸ್ಟಾಮಾರ್ಟ್ ಕಂಪನಿಗಳು ಕೂಡ ಇದೇ ಹಾದಿ ಹಿಡಿಯಲಿವೆ. ಇದರಿಂದ ಕೆಲಸಗಾರರಿಗೆ ನಿರಾಳವಾಗಲಿದೆ ಮತ್ತು ಕಂಪನಿಗಳಿಗೂ ದೀರ್ಘಕಾಲದ ಲಾಭ ಸಿಗಲಿದೆ.