ಮಳೆಗಾಲದಲ್ಲಿ ಗುಡುಗು-ಮಿಂಚಿನ ಅಪಾಯವೇ? Damini App ನಿಮ್ಮ ಜೀವ ಉಳಿಸಬಹುದು

ಮಳೆಗಾಲದಲ್ಲಿ ಗುಡುಗು-ಮಿಂಚಿನ ಅಪಾಯವೇ? Damini App ನಿಮ್ಮ ಜೀವ ಉಳಿಸಬಹುದು

ಮಳೆಗಾಲ ಆರಂಭವಾದ ಬಳಿಕ ಭಾರೀ ಮಳೆಯ ಜೊತೆಗೆ ಗುಡುಗು ಮತ್ತು ಮಿಂಚಿನ ಘಟನೆಗಳೂ ಹೆಚ್ಚಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಮಿಂಚಿನ ಹೊಡೆತದಿಂದ ಪ್ರತಿ ವರ್ಷ ದೇಶದ ವಿವಿಧ ಭಾಗಗಳಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಹೊಲಗಳಲ್ಲಿ ಕೆಲಸ ಮಾಡುವ ರೈತರು, ಕೃಷಿ ಕಾರ್ಮಿಕರು, ಮೀನುಗಾರರು, ನಿರ್ಮಾಣ ಕಾರ್ಮಿಕರು ಹಾಗೂ ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯುವವರು ಮಿಂಚಿನ ಅಪಾಯಕ್ಕೆ ಹೆಚ್ಚು ಒಳಗಾಗುತ್ತಾರೆ. ಈ ಅಪಾಯವನ್ನು ಕಡಿಮೆ ಮಾಡಲು ಐಐಟಿಎಮ್‌ ಪುಣೆ ಅಭಿವೃದ್ಧಿಪಡಿಸಿರುವ (Damini App) ‘ದಾಮಿನಿ: ಲೈಟ್ನಿಂಗ್ ಅಲರ್ಟ್’ ಮೊಬೈಲ್ ಅಪ್ಲಿಕೇಶನ್ ಮಹತ್ವದ ಪಾತ್ರ ವಹಿಸುತ್ತಿದೆ. ಮಿಂಚು ಸಂಭವಿಸುವ ಸಾಧ್ಯತೆ ಇದ್ದಾಗ ಮುಂಚಿತವಾಗಿ ಎಚ್ಚರಿಕೆ ನೀಡುವ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳಲು ಇದು ಅಮೂಲ್ಯ ಸಮಯವನ್ನು ಒದಗಿಸುತ್ತದೆ.

Digit.in Survey
✅ Thank you for completing the survey!

Also Read : Poco M8 Power 5G ಬಿಡುಗಡೆಗೆ ಇನ್ನು ಕೆಲವೇ ದಿನಗಳ ಬಾಕಿ! 8,000mAh ಬ್ಯಾಟರಿ ಖಚಿತ

ಏನಿದು Damini ಅಪ್ಲಿಕೇಶನ್

ದಾಮಿನಿ: ಲೈಟ್ನಿಂಗ್ ಅಲರ್ಟ್ ಎಂಬುದು ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಐಐಟಿಎಂ ಪುಣೆ (IITM Pune) ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಶನ್ ಆಗಿದೆ. ಈ ಆಪ್‌ ನಿಮ್ಮ ಪ್ರಸ್ತುತ ಸ್ಥಳದಲ್ಲಿ ಮಿಂಚು ಬೀಳುವ ಸಾಧ್ಯತೆ ಇದ್ದರೆ ಮುಂಚಿತವಾಗಿಯೇ ಎಚ್ಚರಿಕೆ ನೀಡುತ್ತದೆ. ಇದರಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಅಗತ್ಯವಾದ ಸಮಯ ದೊರೆಯುತ್ತದೆ.

Damini App Offers Real Time Lightning Alerts Across India

ಈ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ?

ದಾಮಿನಿ ಅಪ್ಲಿಕೇಶನ್ ನಿಮ್ಮ ಮೊಬೈಲ್‌ನ ಲೊಕೇಶನ್ ಸೇವೆ ಬಳಸಿ ನೀವು ಇರುವ ಸ್ಥಳವನ್ನು ಗುರುತಿಸುತ್ತದೆ. ನಿಮ್ಮ ಸುತ್ತಮುತ್ತ ಮಿಂಚು ಸಂಭವಿಸುವ ಸಾಧ್ಯತೆ ಕಂಡುಬಂದರೆ ಕೂಡಲೇ ನೋಟಿಫಿಕೇಶನ್ ಮೂಲಕ ಎಚ್ಚರಿಕೆ ನೀಡುತ್ತದೆ. ಇದರಿಂದ ನೀವು ಸಮಯಕ್ಕೆ ಸರಿಯಾಗಿ ಸುರಕ್ಷಿತ ಕಟ್ಟಡ ಅಥವಾ ಆಶ್ರಯವನ್ನು ತಲುಪಬಹುದು. ಈ ಸೇವೆಯನ್ನು ಬಳಸಲು ನಿಮ್ಮ ಮೊಬೈಲ್‌ನಲ್ಲಿ GPS ಸದಾ ಆನ್ ಆಗಿರಬೇಕು. ಅಲ್ಲದೇ ಇಂಟರ್ನೆಟ್ ಸಂಪರ್ಕ ಕೂಡ ಸಕ್ರಿಯವಾಗಿರಬೇಕು.

ಮಳೆಗಾಲದಲ್ಲಿ ಮಿಂಚಿನ ಘಟನೆಗಳು ಹೆಚ್ಚಾಗುವ ಹಿನ್ನೆಲೆಯಲ್ಲಿ, ದಾಮಿನಿ ಆ್ಯಪ್ ಪ್ರತಿಯೊಬ್ಬರ ಮೊಬೈಲ್‌ನಲ್ಲಿ ಇರಬೇಕಾದ ಉಪಯುಕ್ತ ಸುರಕ್ಷತಾ ಸಾಧನವಾಗಿದೆ. ವಿಶೇಷವಾಗಿ ರೈತರು, ಮೀನುಗಾರರು, ನಿರ್ಮಾಣ ಕಾರ್ಮಿಕರು ಮತ್ತು ಹೊರಾಂಗಣದಲ್ಲಿ ಕೆಲಸ ಮಾಡುವವರು ಈ ಆಪ್‌ ಅನ್ನು ಬಳಸುವುದರಿಂದ ಅಪಾಯವನ್ನು ಕಡಿಮೆ ಮಾಡಬಹುದು. ದಾಮಿನಿ (Damini: Lightning Alert) ಆಪ್‌ ಆಂಡ್ರಾಯ್ಡ್‌ ಹಾಗೂ iOS ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಉಚಿತವಾಗಿ ಲಭ್ಯವಿದ್ದು, ಮಿಂಚಿನ ಅಪಾಯದಿಂದ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಲು ನೆರವಾಗುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile