ನಿಮ್ಮ ಆಧಾರ್ ಕಾರ್ಡ್ ಬಳಸಿ ಎಷ್ಟು SIM ಗಳು ಖರೀದಿಯಾಗಿವೆ? ಮೊಬೈಲ್ನಲ್ಲೇ ತಿಳಿಯಿರಿ

ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಿಮ್ ಕಾರ್ಡ್ಗಳು ಚಾಲ್ತಿಯಲ್ಲಿವೆ ಎಂಬುದು ನಿಮಗೆ ಗೊತ್ತಿದೆಯೇ? ನೀವು ಪ್ರಸ್ತುತ ಬಳಸುತ್ತಿರುವ ಸಿಮ್ ಮಾತ್ರವಲ್ಲದೆ, ಹಿಂದೆ ಖರೀದಿಸಿದ್ದ SIM ಕಾರ್ಡ್ಗಳು ಅಥವಾ ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಇತರ ಮೊಬೈಲ್ ನಂಬರ್ಗಳೂ ಇರಬಹುದು. ಕೆಲವೊಮ್ಮೆ ನಮ್ಮ ಗಮನಕ್ಕೆ ಬಾರದೆ ಬೇರೆಯವರು ನಮ್ಮ ಗುರುತಿನ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಸಿಮ್ ಕಾರ್ಡ್ ಪಡೆದಿರುವ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಂಪರ್ಕಗಳಿವೆ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯ. ಇದಕ್ಕಾಗಿ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯ (DoT) ಸಂಚಾರ ಸಾಥಿ ಪೋರ್ಟಲ್ನಲ್ಲಿ ವಿಶೇಷ ಸೌಲಭ್ಯವಿದೆ. ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಮೊಬೈಲ್ ನಂಬರ್ಗಳ ವಿವರಗಳನ್ನು ತಿಳಿದುಕೊಳ್ಳಬಹುದು. ಹಾಗಾದರೆ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ಗಳಿವೆ ಎಂಬುದನ್ನು ಆನ್ಲೈನ್ನಲ್ಲಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ.
SIM: Sanchar Saathi ಪೋರ್ಟಲ್ ಎಂದರೇನು?
ಸಂಚಾರ ಸಾಥಿ ಎಂಬುದು ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯ ಅಧಿಕೃತ ಡಿಜಿಟಲ್ ವೇದಿಕೆಯಾಗಿದೆ. ಮೊಬೈಲ್ ಬಳಕೆದಾರರ ಸುರಕ್ಷತೆ ಹೆಚ್ಚಿಸುವುದು ಮತ್ತು ದೂರಸಂಪರ್ಕ ಸೇವೆಗಳಿಗೆ ಸಂಬಂಧಿಸಿದ ವಂಚನೆಗಳನ್ನು ತಡೆಯುವುದು ಇದರ ಪ್ರಮುಖ ಉದ್ದೇಶ. ಈ ಪೋರ್ಟಲ್ ಮೂಲಕ ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಂಪರ್ಕಗಳು ನೋಂದಣಿಯಾಗಿವೆ ಎಂಬುದನ್ನು ಪರಿಶೀಲಿಸಬಹುದು. ನಿಮಗೆ ಸಂಬಂಧಿಸದ ಅಥವಾ ನೀವು ಬಳಸದೇ ಇರುವ ನಂಬರ್ಗಳು ಕಂಡುಬಂದರೆ, ಅವುಗಳ ವಿರುದ್ಧ ವರದಿ ಸಲ್ಲಿಸುವ ಅವಕಾಶವೂ ಇದೆ.
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ಗಳಿವೆ ಎಂದು ಚೆಕ್ ಮಾಡುವುದು ಹೇಗೆ?
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಮೊಬೈಲ್ ನಂಬರ್ಗಳ ವಿವರಗಳನ್ನು ಸುಲಭವಾಗಿ ಪರಿಶೀಲಿಸಬಹುದು.
ಹಂತ 1: ಮೊದಲು ನಿಮ್ಮ ಮೊಬೈಲ್ನಲ್ಲಿ Chrome ಅಥವಾ ಬೇರೆ ಬ್ರೌಸರ್ ತೆರೆಯಿರಿ. https://tafcop.sancharsaathi.gov.in/ ವೆಬ್ಸೈಟ್ ಭೇಟಿ ನೀಡಿ.
ಹಂತ 2: ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ನಮೂದಿಸಿ. ನಂತರ ಸ್ಕ್ರೀನ್ನಲ್ಲಿ ಕಾಣಿಸುವ ಕ್ಯಾಪ್ಚಾ ಕೋಡ್ ನಮೂದಿಸಿ.
ಹಂತ 3: Validate Captcha ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ಗೆ ಬರುವ OTP ನಮೂದಿಸಿ Login ಆಯ್ಕೆ ಒತ್ತಿರಿ.
ಹಂತ 4: ಈಗ ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಮೊಬೈಲ್ ಸಂಪರ್ಕಗಳ ಪಟ್ಟಿ ಕಾಣಿಸುತ್ತದೆ. ಇಲ್ಲಿ ಎಲ್ಲಾ ನಂಬರ್ಗಳನ್ನು ಪರಿಶೀಲಿಸಬಹುದು.
ಈ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಂಪರ್ಕಗಳಿವೆ ಎಂಬುದನ್ನು ತಿಳಿದುಕೊಳ್ಳಬಹುದು.
ನಿಮ್ಮದಲ್ಲದ ನಂಬರ್ ಕಂಡುಬಂದರೆ ಏನು ಮಾಡಬೇಕು?
ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಪಟ್ಟಿಯಲ್ಲಿ ನಿಮಗೆ ಗೊತ್ತಿಲ್ಲದ ಅಥವಾ ನೀವು ಬಳಸದ ಮೊಬೈಲ್ ನಂಬರ್ ಕಂಡುಬಂದರೆ ಆತಂಕಪಡಬೇಡಿ. ಪೋರ್ಟಲ್ನಲ್ಲಿಯೇ ಅದನ್ನು ವರದಿ ಮಾಡುವ ಅವಕಾಶವಿದೆ.
- This is not my number: ಆ ಮೊಬೈಲ್ ನಂಬರ್ ನಿಮ್ಮದಲ್ಲದಿದ್ದರೆ ಈ ಆಯ್ಕೆಯನ್ನು ಆರಿಸಿ.
- Not Required: ಆ ನಂಬರ್ ನಿಮ್ಮ ಹೆಸರಿನಲ್ಲಿದ್ದರೂ ಈಗ ನಿಮಗೆ ಅಗತ್ಯವಿಲ್ಲದಿದ್ದರೆ ಈ ಆಯ್ಕೆಯನ್ನು ಆರಿಸಿ.
- ನಂತರ Report ಆಯ್ಕೆಯ ಮೂಲಕ ನಿಮ್ಮ ಮನವಿಯನ್ನು ಸಲ್ಲಿಸಿ.
ನೀವು ಸಲ್ಲಿಸಿದ ದೂರಿನ ಆಧಾರದ ಮೇಲೆ ಸಂಬಂಧಪಟ್ಟ ಟೆಲಿಕಾಂ ಕಂಪನಿಯು ಪರಿಶೀಲನೆ ನಡೆಸುತ್ತದೆ. ಅಗತ್ಯವಿದ್ದರೆ ಮರುಪರಿಶೀಲನೆ ಬಳಿಕ ಆ ಸಂಪರ್ಕವನ್ನು ಕಡಿತಗೊಳಿಸಬಹುದು.

