WhatsApp ಚಾಟ್ನಿಂದ ಸ್ಮಾರ್ಟ್ಫೋನ್ ಮೆಮೊರಿ ಫುಲ್ ಆಗಿದೆಯೇ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ
ಸ್ಮಾರ್ಟ್ಫೋನ್ ಬಳಸುವ ಬಹುತೇಕ ಎಲ್ಲರಿಗೂ ಎದುರಾಗುವ ಸಾಮಾನ್ಯ ಸಮಸ್ಯೆ ಎಂದರೆ ಫೋನ್ನ ಸ್ಟೋರೇಜ್ ಬೇಗನೆ ತುಂಬಿಕೊಳ್ಳುವುದು. ಅದರಲ್ಲೂ WhatsApp ಬಳಸುವವರಿಗೆ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಸ್ನೇಹಿತರು, ಕುಟುಂಬದವರು, ಆಫೀಸ್ ಗ್ರೂಪ್ಗಳು ಹಾಗೂ ಇತರ ವಾಟ್ಸಾಪ್ ಗ್ರುಪ್ಗಳಿಂದೆ ಪ್ರತಿದಿನ ನೂರಾರು ಫೋಟೋ, ವಿಡಿಯೋ, ಡಾಕ್ಯುಮೆಂಟ್ಗಳು ಬರುತ್ತಿರುತ್ತವೆ. ಹೀಗೆ ದಿನ ಕಳೆದಂತೆ ಫೋನ್ನ ಸ್ಟೋರೇಜ್ ಬಹುತೇಕ ತುಂಬಿಹೋಗುತ್ತದೆ. ಇಂತಹ ಸಂದರ್ಭದಲ್ಲಿ ಅನೇಕರು ವಾಟ್ಸಾಪ್ ಚಾಟ್ಗಳನ್ನು ಡಿಲೀಟ್ ಮಾಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಮುಖ್ಯವಾದ ಫೋಟೋಗಳು ಹಾಗೂ ದಾಖಲೆಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾದರೆ ಪ್ರಮುಖ ಚಾಟ್ಗಳನ್ನು ಕಳೆದುಕೊಳ್ಳದೆಯೇ ವಾಟ್ಸಾಪ್ ಸ್ಟೋರೇಜ್ ಖಾಲಿ ಮಾಡುವುದು ಹೇಗೆ? ಮುಂದೆ ಓದಿರಿ.
WhatsApp: ಯಾವ ಫೈಲ್ಗಳು ಹೆಚ್ಚು ಸ್ಟೋರೇಜ್ ಬಳಸುತ್ತಿವೆ ಎಂದು ತಿಳಿಯಿರಿ
ಇದನ್ನು ಪರಿಶೀಲಿಸಲು ಈ ಹಂತಗಳನ್ನು ಅನುಸರಿಸಿ
1. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ವಾಟ್ಸಾಪ್ ತೆರೆಯಿರಿ.
2. ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
3. Settings ಆಯ್ಕೆ ಮಾಡಿ.
4. ನಂತರ Storage and Data ಮೇಲೆ ಟ್ಯಾಪ್ ಮಾಡಿ.
5. ಈಗ Manage Storage ಆಯ್ಕೆಯನ್ನು ತೆರೆಯಿರಿ.
ಇಲ್ಲಿ ವಾಟ್ಸಾಪ್ ನಿಮ್ಮ ಫೋನ್ನಲ್ಲಿ ಎಷ್ಟು ಜಾಗ ಬಳಸುತ್ತಿದೆ ಎಂಬ ಮಾಹಿತಿ ಕಾಣಿಸುತ್ತದೆ. ಜೊತೆಗೆ ಯಾವ ಚಾಟ್ಗಳು ಹೆಚ್ಚು ಸ್ಟೋರೇಜ್ ಬಳಸುತ್ತಿವೆ ಮತ್ತು ಯಾವ ಫೈಲ್ಗಳು ಹೆಚ್ಚು ಗಾತ್ರ ಹೊಂದಿವೆ ಎಂಬುದನ್ನೂ ಪರಿಶೀಲಿಸಬಹುದು
- ದೊಡ್ಡ ಗಾತ್ರದ ವಿಡಿಯೋ ಮತ್ತು ಫೋಟೋಗಳನ್ನು ಡಿಲೀಟ್ ಮಾಡಿ
ವಾಟ್ಸಾಪ್ ಸ್ಟೋರೇಜ್ ಬೇಗನೆ ತುಂಬಲು ಪ್ರಮುಖ ಕಾರಣವೆಂದರೆ ದೊಡ್ಡ ಗಾತ್ರದ ವಿಡಿಯೋಗಳು ಮತ್ತು ಫೋಟೋಗಳು. ವಿಶೇಷವಾಗಿ ಗ್ರೂಪ್ಗಳಲ್ಲಿ ಹಂಚಿಕೊಳ್ಳುವ ದೀರ್ಘ ವಿಡಿಯೋಗಳು ಹೆಚ್ಚಿನ ಜಾಗವನ್ನು ಬಳಸುತ್ತವೆ. Manage Storage ವಿಭಾಗದಲ್ಲಿ ದೊಡ್ಡ ಫೈಲ್ಗಳನ್ನು ಗುರುತಿಸಿ ಪರಿಶೀಲಿಸಿ. ನಿಮಗೆ ಅಗತ್ಯವಿಲ್ಲದ ವಿಡಿಯೋಗಳು, ಫೋಟೋಗಳು ಮತ್ತು ಇತರ ಫೈಲ್ಗಳನ್ನು ಆಯ್ಕೆ ಮಾಡಿ ಡಿಲೀಟ್ ಮಾಡಬಹುದು. ಆದರೆ ಕುಟುಂಬದ ಫೋಟೋಗಳು, ಪ್ರಮುಖ ದಾಖಲೆಗಳು ಅಥವಾ ಕೆಲಸಕ್ಕೆ ಸಂಬಂಧಿಸಿದ ಫೈಲ್ಗಳನ್ನು ಡಿಲೀಟ್ ಮಾಡುವ ಮೊದಲು ಮತ್ತೊಮ್ಮೆ ಪರಿಶೀಲಿಸಿ.
- ಹೆಚ್ಚು ಬಾರಿ ಫಾರ್ವರ್ಡ್ ಆದ ಫೈಲ್ಗಳನ್ನು ಪರಿಶೀಲಿಸಿ
ವಾಟ್ಸಾಪ್ ಗ್ರೂಪ್ಗಳಲ್ಲಿ ಒಂದೇ ಫೋಟೋ ಅಥವಾ ವಿಡಿಯೋ ಹಲವು ಬಾರಿ ಫಾರ್ವರ್ಡ್ ಆಗಿರುತ್ತದೆ. ಇಂತಹ ಅನಗತ್ಯ ಫೈಲ್ಗಳು ನಿಮ್ಮ ಫೋನ್ನಲ್ಲಿ ಹೆಚ್ಚುವರಿ ಜಾಗವನ್ನು ಬಳಸಬಹುದು. Manage Storage ವಿಭಾಗದಲ್ಲಿ Forwarded Many Times ಎಂಬ ಆಯ್ಕೆ ಕಾಣಿಸಿದರೆ ಅದನ್ನು ತೆರೆಯಿರಿ. ಅಲ್ಲಿ ಅನೇಕ ಬಾರಿ ಫಾರ್ವರ್ಡ್ ಆಗಿರುವ ಫೈಲ್ಗಳನ್ನು ಪರಿಶೀಲಿಸಿ, ಬೇಡವಾದವುಗಳನ್ನು ಮಾತ್ರ ಡಿಲೀಟ್ ಮಾಡಿ. ಇದರಿಂದ ಪ್ರಮುಖ ಸಂದೇಶಗಳನ್ನು ಉಳಿಸಿಕೊಂಡೇ ಅನಗತ್ಯ ಮೀಡಿಯಾ ಫೈಲ್ಗಳನ್ನು ತೆಗೆದುಹಾಕಬಹುದು.
- ಪ್ರಮುಖ ಚಾಟ್ಗಳನ್ನು ಉಳಿಸಿಕೊಂಡು ಮೀಡಿಯಾ ಮಾತ್ರ ಡಿಲೀಟ್ ಮಾಡಿ
ನಿಮ್ಮ ಸ್ನೇಹಿತರು, ಕುಟುಂಬದವರು ಅಥವಾ ಆಫೀಸ್ನವರ ಜೊತೆಗಿನ ಚಾಟ್ಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡುವ ಅಗತ್ಯವಿಲ್ಲ. ನಿರ್ದಿಷ್ಟ ಚಾಟ್ನಲ್ಲಿರುವ ಅನಗತ್ಯ ಫೋಟೋ, ವಿಡಿಯೋ ಮತ್ತು ಡಾಕ್ಯುಮೆಂಟ್ಗಳನ್ನು ಮಾತ್ರ ತೆಗೆದುಹಾಕಬಹುದು.
1. ವಾಟ್ಸಾಪ್ನಲ್ಲಿ ನಿಮಗೆ ಬೇಕಾದ ಚಾಟ್ ತೆರೆಯಿರಿ.
2. ಮೇಲ್ಭಾಗದಲ್ಲಿರುವ ವ್ಯಕ್ತಿಯ ಅಥವಾ ಗ್ರೂಪ್ನ ಹೆಸರಿನ ಮೇಲೆ ಕ್ಲಿಕ್ ಮಾಡಿ.
3. Manage Storage ಆಯ್ಕೆಮಾಡಿ.
4. ಆ ಚಾಟ್ನಲ್ಲಿರುವ ಮೀಡಿಯಾ ಫೈಲ್ಗಳನ್ನು ಪರಿಶೀಲಿಸಿ.
5. ಬೇಡವಾದ ಫೈಲ್ಗಳನ್ನು ಆಯ್ಕೆ ಮಾಡಿ ಡಿಲೀಟ್ ಮಾಡಿ.
- ವಾಟ್ಸಾಪ್ ಆಟೋ ಡೌನ್ಲೋಡ್ ಆಯ್ಕೆಯನ್ನು ಆಫ್ ಮಾಡಿ
ನಿಮ್ಮ ವಾಟ್ಸಾಪ್ ಗ್ರೂಪ್ಗಳಿಗೆ ಬರುವ ಪ್ರತಿಯೊಂದು ಫೋಟೋ, ವಿಡಿಯೋ ಮತ್ತು ಡಾಕ್ಯುಮೆಂಟ್ ಸ್ವಯಂಚಾಲಿತವಾಗಿ ಡೌನ್ಲೋಡ್ ಆಗುತ್ತಿದ್ದರೆ ಫೋನ್ ಸ್ಟೋರೇಜ್ ಬೇಗನೆ ತುಂಬುತ್ತದೆ. ಇದನ್ನು ತಪ್ಪಿಸಲು Auto Download ಸೆಟ್ಟಿಂಗ್ ಬದಲಾಯಿಸಬಹುದು.
- ವಾಟ್ಸಾಪ್ ತೆರೆಯಿರಿ.
- Settings ವಿಭಾಗಕ್ಕೆ ಹೋಗಿ.
- Storage and Data ಆಯ್ಕೆಮಾಡಿ.
- Media Auto-Download ವಿಭಾಗವನ್ನು ಪರಿಶೀಲಿಸಿ.
- Photos, Audio, Videos ಮತ್ತು Documents ಡೌನ್ಲೋಡ್ ಆಗುವ ಆಯ್ಕೆಗಳನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿ.