Ai image
ಒಂದು ಕಾಲದಲ್ಲಿ ಅತ್ಯುತ್ತಮ ಫೋಟೋ ಸೆರೆಹಿಡಿಯಲು ದುಬಾರಿ DSLR ಅಥವಾ ಮಿರರ್‌ಲೆಸ್ ಕ್ಯಾಮೆರಾಗಳೇ ಬೇಕಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಮೂಲಕವೇ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ. ಇದಕ್ಕೆ ಕೃತಕ ಬುದ್ಧಿಮತ್ತೆ (AI) ನೆರವಾಗಿದೆ. ಇಂದಿನ ಎಐ ಕ್ಯಾಮೆರಾಗಳು ಕೇವಲ ಫೋಟೋವನ್ನು ಮಾತ್ರ ಸೆರೆಹಿಡಿಯುವುದಿಲ್ಲ ಬದಲಿಗೆ ಅದರ ಗುಣಮಟ್ಟವನ್ನು ಆಟೋಮ್ಯಾಟಿಕ್ ಅಪ್‌ಗ್ರೇಡ್ ಮಾಡಿ ಅತ್ಯುತ್ತಮ ಫಲಿತಾಂಶ ನೀಡುತ್ತಿವೆ. ಎಐ ಕ್ಯಾಮೆರಾದ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : BSNL ಸಂಸ್ಥೆಯಿಂದ ಹೊಸ ಸ್ಯಾಟಲೈಟ್ ಫೋನ್ ಬಿಡುಗಡೆ! ಇದು ಐಫೋನ್‌ಗಿಂತ ದುಬಾರಿ
AI ಕ್ಯಾಮೆರಾಗಳಲ್ಲಿ ಫೋಟೋ ಸೆರೆಹಿಡಿಯುವಾಗ ಅದರಲ್ಲಿರುವ ವ್ಯಕ್ತಿ, ಪ್ರಕೃತಿ, ಆಹಾರ, ಸಾಕುಪ್ರಾಣಿಗಳು ಅಥವಾ ರಾತ್ರಿ ದೃಶ್ಯಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಕ್ಯಾಮೆರಾದ ಸೆಟ್ಟಿಂಗ್‌ಗಳನ್ನು ಆಟೋಮ್ಯಾಟಿಕ್ ಸೆಟ್‌ಮಾಡಿಕೊಳ್ಳುವ ತಂತ್ರಜ್ಞಾನ ಹೊಂದಿವೆ. ಬೆಳಕು, ಕಲರ್, ಕಾಂಟ್ರಾಸ್ಟ್, ಶಾರ್ಪ್‌ನೆಸ್ ಹಾಗೂ ಎಕ್ಸ್‌ಪೋಶರ್‌ನ್ನು AI ಕ್ಷಣಾರ್ಧದಲ್ಲಿ ಸೆಟ್ ಮಾಡಿಕೊಳ್ಳುವುದರಿಂದ ಬಳಕೆದಾರರು ಯಾವುದೇ ತಾಂತ್ರಿಕ ಜ್ಞಾನವಿಲ್ಲದೆ ಉತ್ತಮ ಫೋಟೋ ಪಡೆಯಬಹುದಾಗಿದೆ.
ಈ ಮೊದಲು ಮಂದ ಬೆಳಕಿನ ಸಮಯದಲ್ಲಿ ಮೊಬೈಲ್ ಮೂಲಕ ತೆಗೆದ ಫೋಟೋಗಳು ಮಸುಕಾಗಿರುತ್ತಿದ್ದವು. ಈಗ ಎಐ ಆಧಾರಿತ ನೈಟ್ ಮೋಡ್ ಕಡಿಮೆ ಬೆಳಕಿನಲ್ಲಿಯೂ ಸ್ಪಷ್ಟ ಹಾಗೂ ಪ್ರಕಾಶಮಾನವಾದ ಫೋಟೋ ಸೆರೆಹಿಡಿಯುತ್ತದೆ. ಅದೇ ರೀತಿ Portrait ಮೋಡ್ ಮೂಲಕ ಹಿನ್ನೆಲೆಯನ್ನು ನೈಸರ್ಗಿಕವಾಗಿ ಬ್ಲರ್ ಮಾಡಿ DSLR ಶೈಲಿಯ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ. ಇದರ ಜೊತೆಗೆ ಎಐ Scene Recognition ಮೂಲಕ ಫೋಟೋಗಳು ಇನ್ನಷ್ಟು ಆಕರ್ಷಕವಾಗಿ ಕಾಣುತ್ತವೆ.
ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಫೋಟೋ ತೆಗೆದ ನಂತರವೂ ಎಐ ಕೆಲಸ ಮುಂದುವರಿಸುತ್ತದೆ. ಅನಗತ್ಯ ವಸ್ತುಗಳನ್ನು ತೆಗೆದುಹಾಕುವುದು, ಹಿನ್ನಲೆಯನ್ನು ಬದಲಾಯಿಸುವುದು, ಮಸುಕಾದ ಚಿತ್ರಗಳನ್ನು ಸ್ಪಷ್ಟಗೊಳಿಸುವುದು, ಮುಖದ ಬೆಳಕು ಸರಿಪಡಿಸುವುದು ಹಾಗೂ ಹಳೆಯ ಫೋಟೋಗಳ ಗುಣಮಟ್ಟ ಹೆಚ್ಚಿಸುವಂತಹ ಹಲವು ಕೆಲಸಗಳನ್ನು ಕೆಲವೇ ಸೆಕೆಂಡುಗಳಲ್ಲಿ ಮಾಡಬಹುದು. ಹಿಂದೆ ಇಂತಹ ಎಡಿಟಿಂಗ್ ಮಾಡಲು ವಿಶೇಷ ಸಾಫ್ಟ್‌ವೇರ್ ಬೇಕಾಗುತ್ತಿತ್ತು, ಆದರೆ ಈಗ ಮೊಬೈಲ್‌ನಲ್ಲೇ ಸಾಧ್ಯವಾಗಿದೆ.
ಇನ್‌ಸ್ಟಾಗ್ರಾಂ, ಯೂಟ್ಯೂಬ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಿಗೆ ಕಂಟೆಂಟ್ ರಚಿಸುವವರಿಗೆ ಎಐ ಕ್ಯಾಮೆರಾ ಸಹಾಯಕವಾಗಿದೆ. ಟ್ರಾವೆಲ್ ಬ್ಲಾಗರ್‌ಗಳು, ಫುಡ್ ಕ್ರಿಯೇಟರ್‌ಗಳು, ವಿದ್ಯಾರ್ಥಿಗಳು, ಆನ್‌ಲೈನ್ ಮಾರಾಟಗಾರರು ಹಾಗೂ ಸಾಮಾನ್ಯ ಬಳಕೆದಾರರೂ ಕೂಡ ಕಡಿಮೆ ಸಮಯದಲ್ಲಿ ಉತ್ತಮ ಗುಣಮಟ್ಟದ ಫೋಟೋ ಮತ್ತು ವೀಡಿಯೊಗಳನ್ನು ರಚಿಸಬಹುದಾಗಿದೆ. ಎಐ ನೆರವಿನಿಂದ ಮೊಬೈಲ್ ಫೋಟೋಗ್ರಫಿ ಈಗ ಎಲ್ಲರಿಗೂ ಸುಲಭ ಹಾಗೂ ವೃತ್ತಿಪರ ಅನುಭವವನ್ನು ನೀಡುತ್ತಿದೆ.
ಮುಂದಿನ ಕೆಲವು ವರ್ಷಗಳಲ್ಲಿ ಎಐ ಕ್ಯಾಮೆರಾಗಳು ಬಳಕೆದಾರರ ಅಭಿರುಚಿಯನ್ನು ಅರ್ಥಮಾಡಿಕೊಂಡು ಆಟೋಮ್ಯಾಟಿಕ್ ಆಗಿ ಫೋಟೋ ಶೈಲಿಯನ್ನು ಆಯ್ಕೆ ಮಾಡುವುದು, ನೈಜ ಸಮಯದಲ್ಲೇ ವೀಡಿಯೊ ಗುಣಮಟ್ಟ ಸುಧಾರಿಸುವ ಕೆಲಸ ಮಾಡಬಹುದು. ಅಲ್ಲದೇ ಸ್ಮಾರ್ಟ್‌ಫೋನ್ ಕಂಪನಿಗಳು ಈಗ ಕ್ಯಾಮೆರಾದ ಮೆಗಾಪಿಕ್ಸೆಲ್‌ಗಿಂತ ಎಐ ಸಾಮರ್ಥ್ಯಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಇದೇ ಕಾರಣ. ಒಟ್ಟಾರೆ ಮೊಬೈಲ್ ಕ್ಯಾಮೆರಾಗಳಲ್ಲಿ ಎಐ ಆಗಮನವು ಫೋಟೋಗ್ರಫಿಯ ಅರ್ಥವನ್ನೇ ಬದಲಾಯಿಸಿದೆ. ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ದುಬಾರಿ ಕ್ಯಾಮೆರಾ ಅಗತ್ಯವಿಲ್ಲ ಎಂಬುದನ್ನು ಎಐ ಸಾಬೀತುಪಡಿಸಿದೆ.