ಚೀನಾ ಮೂಲದ ವಿವೋ ಮೊಬೈಲ್ ಕಂಪನಿಯು ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2026 ಕಾರ್ಯಕ್ರಮದಲ್ಲಿ ತನ್ನ ಹೊಸ Vivo X300 Ultra ಮೊಬೈಲ್ ಅನ್ನು ಪ್ರದರ್ಶಿಸಿದೆ. ಅಲ್ಲದೇ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡುವ ಸೂಚನೆಗಳನ್ನು ಹೊರಹಾಕಿದೆ. ವಿವೋದ ವೆಬ್‌ಬಿಯೊ ಪೋಸ್ಟ್ ಪ್ರಕಾರ ಈ ದೈತ್ಯ ಮೊಬೈಲ್ 200MP ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್ ಅನ್ನು ಪಡೆದಿರಲಿದೆ ಎನ್ನಲಾಗಿದೆ. ಇನ್ನು ವಿವೋದ ಮುಂಬರುವ ಈ ಹೊಸ ಫೋನ್ ಡಿಸ್‌ಪ್ಲೇ, ಕ್ಯಾಮೆರಾ, ಬ್ಯಾಟರಿ ಹಾಗೂ ಪ್ರೊಸೆಸರ್ ಫೀಚರ್ಸ್‌ಗಳಲ್ಲಿ ಹಿಂದಿನ ಮಾಡೆಲ್‌ಗಿಂತ ಹೆಚ್ಚಿನ ಅಪ್‌ಗ್ರೇಡ್ ಪಡೆದಿರುವ ನಿರೀಕ್ಷೆಗಳನ್ನು ಮೂಡಿಸಿದೆ. ಇನ್ನುಳಿದಂತೆ ವಿವೋ X300 ಅಲ್ಟ್ರಾ ಮೊಬೈಲ್‌ನ ನಿರೀಕ್ಷಿತ ಫೀಚರ್ಸ್, ಲಾಂಚ್ ಡೇಟ್ ಹಾಗೂ ಇನ್ನಷ್ಟು ಮಾಹಿತಿಗಳನ್ನು ಮುಂದೆ ತಿಳಿಯೋಣ.
Also Read : ಇಂದಿನಿಂದ Google Pixel 10a ಮೊಬೈಲ್ ಖರೀದಿಗೆ ಲಭ್ಯ! ಬೆಲೆ ಹಾಗೂ ಫೀಚರ್ಸ್ ಮಾಹಿತಿ ನೋಡಿ
ವಿವೋ ಕಂಪನಿಯು ಪರಿಚಯಿಸಲಿರುವ ವಿವೋ X300 ಅಲ್ಟ್ರಾ ಮೊಬೈಲ್ ಬಗ್ಗೆ ಮಾರುಕಟ್ಟೆಯಲ್ಲಿ ಕುತೂಹಲ ಮೂಡಿದೆ. ಇನ್ನು ವಿವೋ X300 ಅಲ್ಟ್ರಾ ಐದನೇ ತಲೆಮಾರಿನ ZEISS ಟ್ಯೂನ್ ಮಾಡಲಾದ 200MP ಪೆರಿಸ್ಕೋಪ್ ಟೆಲಿಫೋಟೋ ಸ್ಯಾಮ್‌ಸಂಗ್ HP0 ಸೆನ್ಸಾರ್ ಅನ್ನು ಒಳಗೊಂಡಿರಬಹುದು ಎನ್ನಲಾಗಿದೆ. ಟೆಲಿಫೋಟೋ ಮಾಡ್ಯೂಲ್ ವಿವೋದ ಬ್ಲೂಇಮೇಜ್ ಇಮೇಜಿಂಗ್ ವ್ಯವಸ್ಥೆಯನ್ನು ಸಹ ಒಳಗೊಂಡಿರುವ ನಿರೀಕ್ಷೆಗಳು ಇವೆ. ಅಲ್ಲದೇ ಬ್ಲೂಪ್ರಿಂಟ್ ಹೈ-ರಿಫ್ರೆಶ್ ಫೋಕಸ್ ಟ್ರ್ಯಾಕಿಂಗ್ ಎಂಜಿನ್ ಎಂಬ ಹೊಸ ಫೋಕಸ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಪರಿಚಯಿಸುವ ಸಾಧ್ಯತೆಗಳು ಇವೆ.
ವಿವೋ ಸಂಸ್ಥೆಯು ವಿವೋ X300 ಅಲ್ಟ್ರಾ ಮೊಬೈಲ್ ಮಾರ್ಚ್ ತಿಂಗಳ ಅಂತ್ಯದಲ್ಲಿ ಚೀನಾದಲ್ಲಿ ಮೊದಲು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇನ್ನು 2026 ರ ಎರಡನೇ ತ್ರೈಮಾಸಿಕದಲ್ಲಿ ಏಪ್ರಿಲ್ ಮತ್ತು ಜೂನ್ ನಡುವೆ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡುವ ಸಾಧ್ಯತೆಗಳು ಅಧಿಕವಾಗಿವೆ. ಅಂದಹಾಗೆ ಭಾರತದಲ್ಲಿ ಈ ಫೋನ್ ಬೆಲೆ ಸುಮಾರು 1,60,000 ರೂ.ಗಳು ಎಂದು ಅಂದಾಜಿಸಲಾಗಿದೆ.
ಇನ್ನು ಲೀಕ್ ಮಾಹಿತಿಗಳ ಪ್ರಕಾರ, Vivo X300 Ultra ಕ್ವಾಲ್ಕಾಮ್ Snapdragon 8 Elite Gen 5 ಚಿಪ್‌ಸೆಟ್ ಪ್ರೊಸೆಸರ್ ಅನ್ನ ಒಳಗೊಂಡಿರುವ ನಿರೀಕ್ಷೆಯಿದೆ. ಇನ್ನು ಈ ಮೊಬೈಲ್ ಡಿಸ್‌ಪ್ಲೇ ಬಗ್ಗೆ ನೋಡುವುದಾದರೇ ಇದು 6.82 ಇಂಚಿನ 2K LTPO OLED ಸ್ಕ್ರೀನ್ ಅನ್ನು ಪಡೆದಿರುವ ನಿರೀಕ್ಷೆಗಳು ಇವೆ. ಹಾಗೆಯೇ ಈ ಫೋನ್ 7,000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿರುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬ್ಯಾಟರಿ ಫೀಚರ್ ಇದರ ಪ್ರಮುಖ ಹೈಲೈಟ್ ಅಂಶಗಳಲ್ಲಿ ಒಂದಾಗಲಿದೆ ಎನ್ನಲಾಗಿದೆ. ಬಿಗ್ ಬ್ಯಾಟರಿಗೆ ಪೂರಕವಾಗಿ 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ನೀಡಬಹುದು ಎನ್ನಲಾಗಿದೆ.
Vivo X300 Ultra ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಜೊತೆಗೆ ಲಗ್ಗೆ ಇಡುವ ನಿರೀಕ್ಷೆಗಳು ಇವೆ. ಇನ್ನು ಇದು 200MP ಪ್ರಾಥಮಿಕ ಸೆನ್ಸಾರ್, 200MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ, 50MP ಅಲ್ಟ್ರಾ ವೈಡ್ ಲೆನ್ಸ್ ಮತ್ತು 5MP ಸೆನ್ಸಾರ್ ಅನ್ನು ಒಳಗೊಂಡಿರಲಿದೆ ಎಂದು ವದಂತಿಗಳಿವೆ. ಅಲ್ಲದೇ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 50MP ಕ್ಯಾಮೆರಾ ಒದಗಿಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಹಾಗೆಯೇ ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಐಪಿ 69 ರೇಟಿಂಗ್‌ನೊಂದಿಗೆ ಬರಬಹುದು ಮತ್ತು ಯುಎಸ್‌ಬಿ 3.2 ಟೈಪ್-ಸಿ ಪೋರ್ಟ್ ಅನ್ನು ಸಹ ಹೊಂದಿದೆ ಎಂದು ಹೇಳಲಾಗಿದೆ. ಮುಂಬರುವ ಹೊಸ Vivo X300 Ultra ಫೋನ್ ಬಗ್ಗೆ ವಿವೋ ಕಂಪನಿಯು ಅಧಿಕೃತವಾಗಿ ಯಾವುದೇ ಹೆಚ್ಚಿನ ಮಾಹಿತಿ ಘೋಷಿಸಿಲ್ಲ.