ಸ್ಕ್ಯಾಮ್ ಮೆಸೆಜ್‌ಗಳಿಂದ ಬಳಕೆದಾರರನ್ನು ರಕ್ಷಿಸಲು WhatsApp ಸಂಸ್ಥೆಯಿಂದ ಹೊಸ ಫೀಚರ್!

ಜನಪ್ರಿಯ WhatsApp ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತೊಂದು ಹೊಸ ಫೀಚರ್‌ ಪರಿಚಯಿಸಲು ಸಿದ್ಧವಾಗುತ್ತಿದೆ. ಮೆಟಾ ಈಗಾಗಲೇ ಘೋಷಿಸಿರುವ Scam Alert ಆಯ್ಕೆ ಇದೀಗ ಪರೀಕ್ಷಾ ಹಂತಕ್ಕೆ ಪ್ರವೇಶಿಸಿದೆ. ಕೆಲವು ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಈ ಫೀಚರ್‌ ಲಭ್ಯವಾಗುತ್ತಿರುವುದು ಕಂಡುಬಂದಿದ್ದು ಶೀಘ್ರದಲ್ಲೇ ಸಾಮಾನ್ಯ ಬಳಕೆದಾರರಿಗೂ ಬಿಡುಗಡೆಯಾಗುವ ಸಾಧ್ಯತೆಯಿದೆ. ಅಪರಿಚಿತ ವ್ಯಕ್ತಿಗಳಿಂದ ಬರುವ ಅನುಮಾನಾಸ್ಪದ ಸಂದೇಶಗಳನ್ನು ಗುರುತಿಸಿ, ಅವು ಸ್ಕ್ಯಾಮ್ ಆಗಿರುವ ಸಾಧ್ಯತೆ ಇದ್ದರೆ ಬಳಕೆದಾರರಿಗೆ ಮುನ್ನೆಚ್ಚರಿಕೆ ನೀಡುವುದು ಈ ಫೀಚರ್‌ನ ಮುಖ್ಯ ಉದ್ದೇಶವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಆಫರ್‌ನಲ್ಲಿ ದೈತ್ಯ Xiaomi 17 Ultra ಸ್ಮಾರ್ಟ್‌ಫೋನ್‌ ಖರೀದಿಸಲು ಇದುವೇ ಅತ್ಯುತ್ತಮ ಸಮಯ!

WhatsApp: Scam Alert ಫೀಚರ್‌

WABetaInfo ವರದಿ ಪ್ರಕಾರ, ವಾಟ್ಸಾಪ್ ಆವೃತ್ತಿ 2.26.34.1 ಮೂಲಕ ಸೀಮಿತ ಸಂಖ್ಯೆಯ ಆಂಡ್ರಾಯ್ಡ್ ಬೀಟಾ ಪರೀಕ್ಷಕರಿಗೆ Scam Alert ಫೀಚರ್‌ ಅನ್ನು ನೀಡುತ್ತಿದೆ. ಈ ಫೀಚರ್‌ ಬಳಕೆದಾರರ ಸಾಧನದಲ್ಲೇ ಮೆಷಿನ್ ಲರ್ನಿಂಗ್ ಮಾದರಿಯನ್ನು ಬಳಸಿಕೊಂಡು ಸಂದೇಶಗಳನ್ನು ಪರಿಶೀಲಿಸುತ್ತದೆ. ಅಪರಿಚಿತ ಕಾಂಟ್ಯಾಕ್ಟ್‌ನಿಂದ ಬಂದಿರುವ ಮೆಸೆಜ್‌ಗಳು ಸಾಮಾನ್ಯವಾಗಿ ಕಂಡುಬರುವ ಸ್ಕ್ಯಾಮ್ ಮಾದರಿಗಳಿಗೆ ಹೊಂದಿಕೆಯಾಗುತ್ತಿವೆಯೇ ಎಂಬುದನ್ನು ಇದು ಗುರುತಿಸಲು ಪ್ರಯತ್ನಿಸುತ್ತದೆ. ಮೆಸೆಜ್ ಸಂಭಾವ್ಯ ಸ್ಕ್ಯಾಮ್ ಆಗಿರಬಹುದು ಎಂದು ಸಿಸ್ಟಮ್‌ಗೆ ಅನುಮಾನ ಬಂದರೆ, ಸಂಬಂಧಿತ ಚಾಟ್‌ನಲ್ಲೇ ಬಳಕೆದಾರರಿಗೆ ಎಚ್ಚರಿಕೆ ಕಾಣಿಸಿಕೊಳ್ಳುತ್ತದೆ. ಬಳಿಕ ಬಳಕೆದಾರರು ಆ ಚಾಟ್ ಅನ್ನು ಬ್ಲಾಕ್ ಮಾಡಬಹುದು.

ಸ್ಕ್ಯಾಮ್‌ ಅಲರ್ಟ್‌ ಫೀಚರ್‌ ಆಕ್ಟಿವ್ ಮಾಡುವುದು ಹೇಗೆ?

ವರದಿಗಳ ಪ್ರಕಾರ ಈ ಫೀಚರ್‌ ಅನ್ನು ಬಳಕೆದಾರರು ಹಸ್ತಚಾಲಿತವಾಗಿ ಸಕ್ರಿಯಗೊಳಿಸುವ ಆಯ್ಕೆಯನ್ನೂ ಪಡೆಯಬಹುದು. ಇದಕ್ಕಾಗಿ ವಾಟ್ಸಾಪ್‌ನ Settings > Account ವಿಭಾಗಕ್ಕೆ ತೆರಳಬೇಕಾಗುತ್ತದೆ. ಸ್ಕ್ಯಾಮ್‌ ಅಲರ್ಟ್‌ ಒಂದು ಐಚ್ಛಿಕ ಆಯ್ಕೆ ಆಗಿದ್ದು, ವಾಟ್ಸಾಪ್‌ನ ಈಗಿರುವ End-to-End Encryption ವ್ಯವಸ್ಥೆಗೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ ಎಂದು ಮೆಟಾ ತಿಳಿಸಿದೆ.

ಮೆಟಾ ಈ ತಿಂಗಳ ಆರಂಭದಲ್ಲಿ ಸ್ಕ್ಯಾಮ್‌ ಅಲರ್ಟ್‌ ಆಯ್ಕೆಯ ಕುರಿತು ಹೆಚ್ಚಿನ ಮಾಹಿತಿ ನೀಡಿತ್ತು. ಅದರ ಪ್ರಕಾರ ಸಾಧನಕ್ಕೆ ಮೆಷಿನ್ ಲರ್ನಿಂಗ್ ಮಾದರಿಯನ್ನು ಡೌನ್‌ಲೋಡ್ ಮಾಡಲಾಗುತ್ತದೆ. ನಂತರ ಕಾಂಟ್ಯಾಕ್ಟ್‌ನಲ್ಲಿ ಇಲ್ಲದ ವ್ಯಕ್ತಿಗಳಿಂದ ಬರುವ ಮೆಸೆಜ್‌ಗಳನ್ನು ಈ ಮಾದರಿ ವಿಶ್ಲೇಷಿಸಿ, ಅವು ಈಗಾಗಲೇ ಗುರುತಿಸಲಾಗಿರುವ ಸ್ಕ್ಯಾಮ್ ಮಾದರಿಗಳಿಗೆ ಹೊಂದಿಕೆಯಾಗುತ್ತಿವೆಯೇ ಎಂಬುದನ್ನು ಪರಿಶೀಲಿಸುತ್ತದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :