Ai image
ದಿನಸಿ, ಔಷಧಿ ಹಾಗೂ ಅಗತ್ಯ ವಸ್ತುಗಳನ್ನು ನಿಮಿಷಗಳಲ್ಲೇ ಮನೆಬಾಗಿಲಿಗೆ ತಲುಪಿಸುತ್ತಿರುವ ಕ್ವಿಕ್ ಕಾಮರ್ಸ್ ಸೇವೆಗಳು ಈಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿವೆ. ಇನ್ನು ಮುಂದೆ LPG ಗ್ಯಾಸ್ ಸಿಲಿಂಡರ್ ಕೂಡ ಆಪ್ ಮೂಲಕವೇ ಆರ್ಡರ್ ಮಾಡಿ ಪಡೆಯಬಹುದಾಗಿದೆ. ಇದಕ್ಕಾಗಿ ಇನ್‌ಸ್ಟಾಮಾರ್ಟ್ (Instamart) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಹೊಸ ಸಹಭಾಗಿತ್ವ ಘೋಷಿಸಿವೆ. ಆರಂಭಿಕ ಹಂತದಲ್ಲಿ ಈ ಸೇವೆ ಬೆಂಗಳೂರು ನಗರದಲ್ಲಿ ಲಭ್ಯವಾಗಲಿದ್ದು, ಗ್ರಾಹಕರು HP Navya 10kg ಕಾಂಪೋಸಿಟ್ LPG ಸಿಲಿಂಡರ್ ಹಾಗೂ 5kg HPCL LPG ಸಿಲಿಂಡರ್ ಅನ್ನು ಸುಲಭವಾಗಿ ಬುಕ್ ಮಾಡಬಹುದು. ಹಾಗಾದರೆ ಈ ಸೇವೆಯ ವಿಶೇಷತೆಗಳೇನು? ಆರ್ಡರ್ ಮಾಡುವ ವಿಧಾನ ಹೇಗಿರುತ್ತದೆ? ಎಂಬುದನ್ನು ಮುಂದೆ ತಿಳಿಯೋಣ.
Also Read : Jio ಟೆಲಿಕಾಂನ ಈ ಬಜೆಟ್ ಪ್ಲಾನ್‌ನಲ್ಲಿ ಪ್ರತಿದಿನ 2.5GB ಡೇಟಾ ಪ್ರಯೋಜನ ಖಚಿತ
ಹೌದು, ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಮಾರ್ಟ್ ಇದೀಗ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಜೊತೆಗೆ ಕೈಜೋಡಿಸಿದ್ದು ತನ್ನ ಆಪ್ ಮೂಲಕ LPG ಸಿಲಿಂಡರ್‌ಗಳನ್ನು ಮನೆಬಾಗಿಲಿಗೆ ತಲುಪಿಸುವ ಹೊಸ ಸೇವೆಯನ್ನು ಆರಂಭಿಸಿದೆ. ಈ ಸೇವೆ ಸದ್ಯಕ್ಕೆ ಬೆಂಗಳೂರು ನಗರದಲ್ಲಿ ಮಾತ್ರ ಲಭ್ಯವಿದೆ. ಈ ಸೇವೆಯಡಿ ಗ್ರಾಹಕರು HPCLನ ಹೊಸ HP Navya 10 ಕೆಜಿ ಕಾಂಪೋಸಿಟ್ LPG ಸಿಲಿಂಡರ್ ಅನ್ನು ನೇರವಾಗಿ ಇನ್‌ಸ್ಟಾಮಾರ್ಟ್ ಆಪ್ ಮೂಲಕ ಆರ್ಡರ್ ಮಾಡಬಹುದು. ಕಂಪನಿಗಳ ಪ್ರಕಾರ, ಕ್ವಿಕ್ ಕಾಮರ್ಸ್ ವೇದಿಕೆಯ ಮೂಲಕ LPG ಸಿಲಿಂಡರ್ ವಿತರಣೆ ಆರಂಭವಾಗಿರುವುದು ಇದೇ ಮೊದಲ ಬಾರಿಗೆ.
ಇನ್‌ಸ್ಟಾಮಾರ್ಟ್ ಮೂಲಕ ಗ್ರಾಹಕರು 10 ಕೆಜಿ HP Navya ಕಾಂಪೋಸಿಟ್ LPG ಸಿಲಿಂಡರ್ ಜೊತೆಗೆ 5 ಕೆಜಿ HPCL ಮೆಟಲ್ LPG ಸಿಲಿಂಡರ್ ಅನ್ನೂ ಆರ್ಡರ್ ಮಾಡಬಹುದು. HP Navya ಸಿಲಿಂಡರ್ ಸಾಮಾನ್ಯ LPG ಸಿಲಿಂಡರ್‌ಗಳಿಗಿಂತ ಹಗುರವಾಗಿದ್ದು, ತುಕ್ಕು ಹಿಡಿಯದ ವಿನ್ಯಾಸ ಹೊಂದಿದೆ. ಅಲ್ಲದೆ ಇದರ ಅರೆಪಾರದರ್ಶಕ (Semi-transparent) ಬಾಡಿ ಇರುವುದರಿಂದ ಸಿಲಿಂಡರ್‌ನಲ್ಲಿ ಉಳಿದಿರುವ ಗ್ಯಾಸ್ ಪ್ರಮಾಣವನ್ನು ಸುಲಭವಾಗಿ ಪರಿಶೀಲಿಸಬಹುದು. ಇನ್ನೊಂದು ವಿಶೇಷವೆಂದರೆ, ಈ ಸಿಲಿಂಡರ್ ಖರೀದಿಸಲು ಈಗಾಗಲೇ ಗೃಹ ಬಳಕೆಯ LPG ಸಂಪರ್ಕ ಹೊಂದಿರಬೇಕೆಂಬ ನಿಯಮ ಇಲ್ಲ ಎಂದು ಕಂಪನಿಗಳು ಸ್ಪಷ್ಟಪಡಿಸಿವೆ.
ಮೊದಲ ಬಾರಿ ಆರ್ಡರ್ ಮಾಡುವುದನ್ನು ಹೊಸ ಸಿಲಿಂಡರ್ ಖರೀದಿ ಎಂದು ಪರಿಗಣಿಸಲಾಗುತ್ತದೆ. ನಂತರದ ರಿಫಿಲ್ ಆರ್ಡರ್‌ಗಳ ವೇಳೆ ಗ್ರಾಹಕರು ಖಾಲಿ HPCL ಸಿಲಿಂಡರ್ ಅನ್ನು ವಿತರಣಾ ಸಿಬ್ಬಂದಿಗೆ ಹಿಂತಿರುಗಿಸಬೇಕು. ಎಲ್ಲಾ ಆರ್ಡರ್‌ಗಳನ್ನು HPCLನ ಅಧಿಕೃತ ವಿತರಕರ ಜಾಲದ ಮೂಲಕ ಪೂರೈಸಲಾಗುತ್ತದೆ. ತರಬೇತಿ ಪಡೆದ ಸಿಬ್ಬಂದಿಯೇ ಸುರಕ್ಷತಾ ನಿಯಮಗಳನ್ನು ಪಾಲಿಸಿ ಸಿಲಿಂಡರ್‌ಗಳನ್ನು ಮನೆಗೆ ತಲುಪಿಸಲಿದ್ದಾರೆ. ಮೊದಲ ಬಾರಿಗೆ ಖರೀದಿ ಮಾಡುವ ಗ್ರಾಹಕರು ಗುರುತಿನ ಚೀಟಿ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲನೆಗಾಗಿ ನೀಡಬೇಕಾಗುತ್ತದೆ.