ವಾಟ್ಸಾಪ್‌ Username ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್! Meta ಸಂಸ್ಥೆಗೆ ನೋಟಿಸ್ ಜಾರಿ

ಭಾರತದಲ್ಲಿ ವಾಟ್ಸಾಪ್‌ Username (ಬಳಕೆದಾರ ಹೆಸರು) ಫೀಚರ್ಸ್‌ ಅನ್ನು ಪರಿಚಯಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ಈ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಬುಧವಾರ Meta ಕಂಪನಿಗೆ ನೋಟಿಸ್ ಜಾರಿ ಮಾಡಿದ್ದು, ಈ ಫೀಚರ್‌ಗೆ ಸಂಬಂಧಿಸಿದ ಸಮಾಲೋಚನೆ ಪೂರ್ಣಗೊಳ್ಳುವವರೆಗೆ ಭಾರತದಲ್ಲಿ ಅದನ್ನು ಬಿಡುಗಡೆ ಮಾಡದಂತೆ ಸೂಚಿಸಿದೆ. ಅಷ್ಟೇ ಅಲ್ಲದೆ, ಈ ಹೊಸ ವೈಶಿಷ್ಟ್ಯದ ಬಗ್ಗೆ ಮೂರು ದಿನಗಳೊಳಗೆ ಸಂಪೂರ್ಣ ವಿವರಣೆ ಮತ್ತು ಅಗತ್ಯ ಮಾಹಿತಿಯನ್ನು ಸಲ್ಲಿಸುವಂತೆ ಸಚಿವಾಲಯ ಮೆಟಾಗೆ ನಿರ್ದೇಶಿಸಿದೆ.

Also Read : Samsung Galaxy S26 Plus ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ! ಇದು ಸೀಮಿತ ಅವಧಿಯ ಆಫರ್‌

Meta ಸಂಸ್ಥೆಗೆ ನೋಟಿಸ್ ಜಾರಿ

ಮೂಲಗಳ ಪ್ರಕಾರ ವಾಟ್ಸಾಪ್‌ ಪರಿಚಯಿಸುತ್ತಿರುವ Username ವೈಶಿಷ್ಟ್ಯವು ಬಳಕೆದಾರರ ಗೌಪ್ಯತೆ (Privacy) ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಕೆಲವು ಆತಂಕಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ವಿಷಯವನ್ನು ಪರಿಶೀಲಿಸುತ್ತಿದ್ದು, ಸಮಾಲೋಚನೆ ಮುಗಿಯುವವರೆಗೆ ವೈಶಿಷ್ಟ್ಯವನ್ನು ಬಿಡುಗಡೆ ಮಾಡಬಾರದು ಎಂದು ಮೆಟಾಗೆ ಸೂಚನೆ ನೀಡಿದೆ.

ಏನಿದು ವಾಟ್ಸಾಪ್‌ Username ಫೀಚರ್

ಮೆಟಾ ಮಾಹಿತಿಯಂತೆ Username ಎನ್ನುವುದು ಬಳಕೆದಾರರು ತಮ್ಮ ವಾಟ್ಸಾಪ್‌ ಖಾತೆಗೆ ಆಯ್ಕೆ ಮಾಡಿಕೊಳ್ಳಬಹುದಾದ ವಿಶಿಷ್ಟ (Unique) ಗುರುತಾಗಿದೆ. ಇದು @ ಚಿಹ್ನೆಯೊಂದಿಗೆ ಆರಂಭವಾಗುತ್ತದೆ. ಉದಾಹರಣೆಗೆ @Name123. ಈ Username ಮೂಲಕ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಬಹಿರಂಗಪಡಿಸದೇ ಇತರರೊಂದಿಗೆ ಮೆಸೆಜ್‌ ಕಳುಹಿಸಲು ಅಥವಾ ಕರೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಫೋನ್ ಸಂಖ್ಯೆಯ ಗೌಪ್ಯತೆ ಇನ್ನಷ್ಟು ಹೆಚ್ಚಾಗಲಿದೆ.

ಡಿಸ್‌ಪ್ಲೇ ನೇಮ್‌ ಮತ್ತು Username ನಡುವಿನ ವ್ಯತ್ಯಾಸ

ವಾಟ್ಸಾಪ್‌ನಲ್ಲಿ ಈಗಾಗಲೇ ಬಳಕೆದಾರರು ಡಿಸ್‌ಪ್ಲೇ ನೇಮ್‌ ಅನ್ನು ಬಳಸುತ್ತಿದ್ದಾರೆ. ಇದು ಪ್ರೊಫೈಲ್‌ನಲ್ಲಿ ಕಾಣಿಸುವ ಹೆಸರು ಆಗಿದ್ದು, ಒಂದೇ ಹೆಸರನ್ನು ಹಲವರು ಬಳಸಬಹುದು. ಆದರೆ ಹೊಸ Username ಮಾತ್ರ ಪ್ರತಿಯೊಬ್ಬರಿಗೂ ವಿಭಿನ್ನವಾಗಿರಬೇಕು. ಒಂದೇ Username ಅನ್ನು ಇಬ್ಬರು ಬಳಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ Username ಒಂದು ವಿಶಿಷ್ಟ ಗುರುತಾಗಿ ಕಾರ್ಯನಿರ್ವಹಿಸುತ್ತದೆ.

ಈ ಎಲ್ಲ ಸಂದರ್ಭಗಳಲ್ಲಿ Username ಯಾವಾಗಲೂ @ ಚಿಹ್ನೆಯೊಂದಿಗೆ ಪ್ರದರ್ಶಿಸಲಾಗುತ್ತದೆ. ಇದರಿಂದ Username, Display Name ಮತ್ತು ಮೊಬೈಲ್ ಸಂಖ್ಯೆಯ ನಡುವಿನ ವ್ಯತ್ಯಾಸವನ್ನು ಬಳಕೆದಾರರು ಸುಲಭವಾಗಿ ಗುರುತಿಸಬಹುದು. ಸದ್ಯಕ್ಕೆ, ಈ ಫೀಚರ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಕುರಿತು ಕೇಂದ್ರ ಸರ್ಕಾರದ ಪರಿಶೀಲನೆ ಮುಂದುವರಿದಿದ್ದು, ಸರ್ಕಾರದ ಸಮಾಲೋಚನೆ ಪೂರ್ಣಗೊಂಡ ನಂತರವೇ ಮುಂದಿನ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :