illegal and Obscene Content: ಇಂದಿನ ಡಿಜಿಟಲ್ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಪ್ಪು ಮಾಹಿತಿ ಹಾಗೂ ಅಶ್ಲೀಲ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇಂತಹ ಕಾನೂನುಬಾಹಿರ ವಿಷಯಗಳನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರ ರವಾನಿಸಿದೆ. ನಮ್ಮ ದೇಶದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ನಂತಹ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಹೊಸ ಸೂಚನೆಯನ್ನು ನೀಡಿದೆ. ಇಂಟರ್ನೆಟ್‌ನಲ್ಲಿ ಹರಿದಾಡುವ ವಿಷಯಗಳನ್ನು ಸರಿಯಾಗಿ ಪರಿಶೀಲಿಸುವ ಮತ್ತು ನಿಯಂತ್ರಿಸುವ ಜವಾಬ್ದಾರಿ ಆಯಾ ಕಂಪನಿಗಳಿಗೇ ಸೇರಿದ್ದು ಎಂದು ಸರ್ಕಾರ ನೆನಪಿಸಿದೆ.
Also Read: ZEBRONICS Dolby Soundbar: ಇದಕ್ಕಿಂತ ಕಡಿಮೆ ಬೆಲೆಗೆ ಮತ್ತೊಂದಿಲ್ಲ! ಜಬರ್ದಸ್ತ್ ಸೌಂಡ್ ಮತ್ತು ಪ್ರೀಮಿಯಂ ಲುಕ್!
ಇದು ಯಾವುದೇ ಹೊಸ ನಿಯಮವಲ್ಲ ಬದಲಿಗೆ ಈಗ ಇರುವ ಕಾನೂನುಗಳನ್ನೇ ಸರಿಯಾಗಿ ಪಾಲಿಸುವಂತೆ ಸರ್ಕಾರ ಕಂಪನಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದೆ. ಸರ್ಕಾರದ ಮಾಹಿತಿಯ ಪ್ರಕಾರ ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲತೆ ಹಾಗೂ ಸಮಾಜದ ಶಾಂತಿಗೆ ಭಂಗ ತರುವಂತಹ ವಿಡಿಯೋಗಳು ಮತ್ತು ಸಂದೇಶಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಹೆಚ್ಚಾಗಿವೆ ಮತ್ತು ನ್ಯಾಯಾಲಯಗಳು ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಪ್ರತಿಯೊಬ್ಬರಿಗೂ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವ ಸ್ವಾತಂತ್ರ್ಯವಿದೆ ನಿಜ ಆದರೆ ಅದು ಸಂವಿಧಾನದ ಚೌಕಟ್ಟಿನಲ್ಲಿ ಮತ್ತು ಮಿತಿಯಲ್ಲಿ ಇರಬೇಕು ಎಂದು ಸಚಿವಾಲಯವು ಸ್ಪಷ್ಟವಾಗಿ ಹೇಳಿದೆ.
ಐಟಿ ಕಾನೂನುಗಳನ್ನು ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಕೇಂದ್ರ ಸರ್ಕಾರವು ಐಟಿ ಕಾಯ್ದೆ (2000) ಮತ್ತು ಮಾಹಿತಿ ತಂತ್ರಜ್ಞಾನ ನಿಯಮಗಳ (2021) ಬಗ್ಗೆ ಮಹತ್ವದ ಸೂಚನೆ ನೀಡಿದೆ. ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳು ಕೇವಲ ವೇದಿಕೆಗಳಾಗಿ ಉಳಿಯದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸರ್ಕಾರ ಹೇಳಿದೆ. ಯಾರಾದರೂ ದೂರು ನೀಡಿದಾಗ ಮಾತ್ರ ಕ್ರಮ ಕೈಗೊಳ್ಳುವುದು ಸರಿಯಲ್ಲ ಬದಲಾಗಿ ಆಧುನಿಕ ತಂತ್ರಜ್ಞಾನ ಮತ್ತು ಸಿಬ್ಬಂದಿಗಳ ಸಹಾಯದಿಂದ ಕಾನೂನುಬಾಹಿರ ವಿಷಯಗಳನ್ನು ತಾವಾಗಿಯೇ ಪತ್ತೆಹಚ್ಚಿ ಕೂಡಲೇ ಅವುಗಳನ್ನು ಡಿಲೀಟ್ ಮಾಡಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸೂಕ್ಷ್ಮ ವಿಚಾರಗಳಲ್ಲಿ ತಕ್ಷಣದ ಕ್ರಮ ಅಗತ್ಯ ಕೆಲವು ಗಂಭೀರ ವಿಷಯಗಳ ಬಗ್ಗೆ ಸಚಿವಾಲಯವು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋಗಳು, ಕೆಟ್ಟ ಭಾಷೆಯ ಬಳಕೆ, ಬೇರೆಯವರ ಖಾಸಗಿ ಫೋಟೋಗಳನ್ನು ಕೆಟ್ಟದಾಗಿ ಬಳಸುವುದು ಮತ್ತು ‘ಡೀಪ್‌ಫೇಕ್’ (ನಕಲಿ ವಿಡಿಯೋ) ಸೃಷ್ಟಿಸುವ ಪ್ರಕರಣಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಇಂತಹ ವಿಚಾರಗಳಲ್ಲಿ ಸ್ವಲ್ಪ ವಿಳಂಬ ಮಾಡಿದರೂ ಅದನ್ನು ದೊಡ್ಡ ಅಪರಾಧವೆಂದು ಪರಿಗಣಿಸಲಾಗುತ್ತದೆ.
24 ಗಂಟೆಯೊಳಗೆ ಕ್ರಮ ಕೈಗೊಳ್ಳುವುದು ಕಡ್ಡಾಯ ಸರ್ಕಾರ ಅಥವಾ ನ್ಯಾಯಾಲಯವು ಯಾವುದೇ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕಲು ಸೂಚಿಸಿದರೆ ಅದನ್ನು ನಿಗದಿತ ಸಮಯದೊಳಗೆ ಮಾಡಲೇಬೇಕು. ಅದರಲ್ಲೂ ವಿಶೇಷವಾಗಿ ಒಬ್ಬರ ಖಾಸಗಿ ಫೋಟೋಗಳು ಅಥವಾ ನಕಲಿ ವಿಡಿಯೋಗಳ ಬಗ್ಗೆ ದೂರು ಬಂದಲ್ಲಿ ಅಂತಹ ವಿಷಯಗಳನ್ನು ಕೇವಲ 24 ಗಂಟೆಗಳ ಒಳಗಾಗಿ ಇಂಟರ್ನೆಟ್‌ನಿಂದ ತೆಗೆದುಹಾಕುವುದು ಈಗ ಕಡ್ಡಾಯವಾಗಿದೆ. ಒಂದು ವೇಳೆ ಈ ನಿಯಮಗಳನ್ನು ಪಾಲಿಸದಿದ್ದರೆ ಆಯಾ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.