Digit India Top Appliances Award 2026: ತಂತ್ರಜ್ಞಾನದಲ್ಲಿ ಭಾರತ ವಿಶ್ವದೊಂದಿಗೆ ಹೆಜ್ಜೆ ಹಾಕುತ್ತಿದೆ: ಡಾ. ಜಿತೇಂದ್ರ ಸಿಂಗ್
Digit India’s Top Appliance Awards 2026: ಡಿಜಿಟ್ ಇಂಡಿಯಾದ ಟಾಪ್ ಅಪ್ಲೈಯನ್ಸ್ ಅವಾರ್ಡ್ಸ್ 2026 ಕಾರ್ಯಕ್ರಮದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಮಾತನಾಡಿ, ಭಾರತ ಇಂದು ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳೊಂದಿಗೆ ಸಮಾನವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು. ಹಿಂದೆ ಜಾಗತಿಕ ಮಟ್ಟದ ತಂತ್ರಜ್ಞಾನಗಳು ಭಾರತವನ್ನು ತಲುಪಲು ವರ್ಷಗಳ ಕಾಲ ಬೇಕಾಗುತ್ತಿತ್ತು. ಆದರೆ ಈಗ ಹೊಸ ತಂತ್ರಜ್ಞಾನಗಳನ್ನು ದೇಶವು ಅತ್ಯಂತ ವೇಗವಾಗಿ ಅಳವಡಿಸಿಕೊಳ್ಳುತ್ತಿದೆ. ಈ ಪ್ರಗತಿ ಮತ್ತಷ್ಟು ವೇಗ ಪಡೆಯಬೇಕಾದರೆ ತಂತ್ರಜ್ಞಾನದ ಜೊತೆಗೆ ನಮ್ಮ ಮನೋಭಾವದಲ್ಲಿಯೂ ಬದಲಾವಣೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
SurveyAlso Read : Digit India’s Top Appliance Awards 2026: ವಿಜೇತರ ಪೂರ್ಣ ಲಿಸ್ಟ್ ಇಲ್ಲಿದೆ ನೋಡಿ
ಡಿಜಿಟ್ ಕಾರ್ಯಕ್ಕೆ ಮೆಚ್ಚುಗೆ
ಡಿಜಿಟ್ ಆಯೋಜಿಸಿರುವ ಟಾಪ್ ಅಪ್ಲೈಯನ್ಸ್ ಅವಾರ್ಡ್ಸ್ ಕಾರ್ಯಕ್ರಮವನ್ನು ಶ್ಲಾಘಿಸಿದ ಡಾ. ಜಿತೇಂದ್ರ ಸಿಂಗ್, ಸರ್ಕಾರ, ಕೈಗಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರದ ತಜ್ಞರನ್ನು ಒಂದೇ ವೇದಿಕೆಗೆ ಕರೆತರುವ ಇಂತಹ ಕಾರ್ಯಕ್ರಮಗಳು ವಿಚಾರ ವಿನಿಮಯಕ್ಕೆ ಉತ್ತಮ ಅವಕಾಶ ಕಲ್ಪಿಸುತ್ತವೆ ಎಂದು ಹೇಳಿದರು. ಉದ್ಯಮದ ಅನುಭವಗಳಿಂದ ಕಲಿಯುವುದು ಇಂದಿನ ಕಾಲದ ಅಗತ್ಯವಾಗಿದ್ದು, ಸರ್ಕಾರವೂ ಕೈಗಾರಿಕೆಗಳ ಸವಾಲುಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪಾಲುದಾರರಾಗಬೇಕು ಎಂದು ತಿಳಿಸಿದರು.
ಸರ್ಕಾರದ ಜವಾಬ್ದಾರಿ ಕೇವಲ ನೀತಿ ರೂಪಿಸುವುದಲ್ಲ; ಕೈಗಾರಿಕೆ ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವುಗಳ ಬೆಳವಣಿಗೆಗೆ ಸಹಕಾರ ನೀಡುವುದು ಕೂಡ ಅಷ್ಟೇ ಮುಖ್ಯ. ಆದ್ದರಿಂದ ಸರ್ಕಾರ ಮತ್ತು ಖಾಸಗಿ ವಲಯದ ನಡುವೆ ನಿರಂತರ ಸಂವಾದ ಮತ್ತು ಸಹಯೋಗ ಇರಬೇಕು ಎಂದು ಅವರು ಹೇಳಿದರು.
ಭಾರತದ ತಂತ್ರಜ್ಞಾನ ಬೆಳವಣಿಗೆಗೆ ಹೊಸ ವೇಗ
ಕಳೆದ ಹದಿನೈದು ವರ್ಷಗಳಲ್ಲಿ ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಭಾರತ ಮಹತ್ತರ ಬದಲಾವಣೆ ಕಂಡಿದೆ ಎಂದು ಅವರು ಹೇಳಿದರು. ಕ್ವಾಂಟಮ್ ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ, ಡಿಜಿಟಲ್ ಆವಿಷ್ಕಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಚಂದ್ರಯಾನ ಯಶಸ್ಸನ್ನು ಉಲ್ಲೇಖಿಸಿದ ಅವರು, ಭಾರತದಲ್ಲಿ ಪ್ರತಿಭೆ ಮತ್ತು ಮಾನವ ಸಂಪನ್ಮೂಲಗಳಿಗೆ ಎಂದಿಗೂ ಕೊರತೆಯಿರಲಿಲ್ಲ. ಸರಿಯಾದ ನೀತಿಗಳು ಮತ್ತು ಪ್ರೋತ್ಸಾಹ ದೊರೆತ ಬಳಿಕ ಆ ಸಾಮರ್ಥ್ಯ ವಿಶ್ವಕ್ಕೆ ಗೋಚರಿಸಿದೆ ಎಂದರು.
AI ಮತ್ತು ಜೈವಿಕ ತಂತ್ರಜ್ಞಾನವೇ ಭವಿಷ್ಯ
ಮುಂದಿನ ದಿನಗಳಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಕೃತಕ ಬುದ್ಧಿಮತ್ತೆ (AI), ಜೈವಿಕ ತಂತ್ರಜ್ಞಾನ, ಮರುಬಳಕೆ ಮತ್ತು ವೃತ್ತಾಕಾರದ ಆರ್ಥಿಕತೆ ಪ್ರಮುಖ ಪಾತ್ರ ವಹಿಸಲಿವೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ವೈದ್ಯಕೀಯ, ಕೃಷಿ ಮತ್ತು ಆಹಾರ ಸಂಸ್ಕರಣೆಯಂತಹ ಕ್ಷೇತ್ರಗಳಲ್ಲಿ ಜೈವಿಕ ತಂತ್ರಜ್ಞಾನದ ಬಳಕೆ ಇನ್ನಷ್ಟು ಹೆಚ್ಚಲಿದೆ. ನಾಲ್ಕನೇ ಕೈಗಾರಿಕಾ ಕ್ರಾಂತಿ ಈಗಾಗಲೇ ಆರಂಭವಾಗಿದ್ದು, ಅದರ ಕೇಂದ್ರಬಿಂದುವಿನಲ್ಲಿ AI ಮತ್ತು ಬಯೋಟೆಕ್ನಾಲಜಿ ಇವೆ ಎಂದು ಅವರು ತಿಳಿಸಿದರು.
ತಂತ್ರಜ್ಞಾನ ಎಷ್ಟೇ ವೇಗವಾಗಿ ಬೆಳೆಯುತ್ತಿದ್ದರೂ, ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮನೋಭಾವವೂ ಅದೇ ವೇಗದಲ್ಲಿ ಬೆಳೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತಕ್ಕೆ ಅಪಾರ ಅವಕಾಶ
ಭಾರತದ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಯ ಬಗ್ಗೆ ಮಾತನಾಡಿದ ಅವರು, ಖಾಸಗಿ ಕಂಪನಿಗಳಿಗೆ ಅವಕಾಶ ನೀಡಿದ ಬಳಿಕ ದೇಶದ ಬಾಹ್ಯಾಕಾಶ ಆರ್ಥಿಕತೆ ವೇಗವಾಗಿ ವಿಸ್ತರಿಸುತ್ತಿದೆ ಎಂದು ಹೇಳಿದರು. ಕೆಲವೇ ವರ್ಷಗಳ ಹಿಂದೆ ಸೀಮಿತವಾಗಿದ್ದ ಈ ವಲಯದ ಮೌಲ್ಯ ಇಂದು ಸುಮಾರು 9 ಬಿಲಿಯನ್ ಡಾಲರ್ ತಲುಪಿದ್ದು, ಮುಂದಿನ ದಿನಗಳಲ್ಲಿ ಇದು 40–45 ಬಿಲಿಯನ್ ಡಾಲರ್ ಮಟ್ಟಕ್ಕೆ ಬೆಳೆಯುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಭಾರತ ಈಗ ಇತರ ರಾಷ್ಟ್ರಗಳ ತಂತ್ರಜ್ಞಾನವನ್ನು ಅನುಸರಿಸುವ ದೇಶವಲ್ಲ. ಬದಲಾಗಿ, ಹಲವು ಕ್ಷೇತ್ರಗಳಲ್ಲಿ ಇತರ ರಾಷ್ಟ್ರಗಳು ಭಾರತದಿಂದ ಕಲಿಯುವ ಹಂತಕ್ಕೆ ಬಂದಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು.
ತಂತ್ರಜ್ಞಾನದಿಂದ ಶಿಕ್ಷಣಕ್ಕೂ ಹೊಸ ಅವಕಾಶ
ತಂತ್ರಜ್ಞಾನವು ಶಿಕ್ಷಣ ಕ್ಷೇತ್ರದಲ್ಲಿಯೂ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ಯಾವುದೇ ವಿಶೇಷ ತರಬೇತಿಯಿಲ್ಲದೆ ಕೇವಲ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಐಐಟಿ-ಜೆಇಇ ಪರೀಕ್ಷೆಗೆ ಸಿದ್ಧತೆ ನಡೆಸಿದ ವಿದ್ಯಾರ್ಥಿನಿಯ ಉದಾಹರಣೆಯನ್ನು ಅವರು ಹಂಚಿಕೊಂಡರು. ತಂತ್ರಜ್ಞಾನವು ಶಿಕ್ಷಣವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಗ್ರಾಮೀಣ ಮತ್ತು ದೂರದ ಪ್ರದೇಶಗಳ ಯುವಕರಿಗೂ ಹೊಸ ಅವಕಾಶಗಳನ್ನು ಒದಗಿಸುತ್ತಿದೆ ಎಂದರು.
2047 ಗುರಿ ಸಾಧನೆಗೆ ಸರ್ಕಾರ-ಖಾಸಗಿ ವಲಯ ಕೈಜೋಡಿಸಬೇಕು
2047ರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸರ್ಕಾರ ಮತ್ತು ಖಾಸಗಿ ವಲಯದ ನಡುವೆ ಇನ್ನಷ್ಟು ಬಲವಾದ ಸಹಭಾಗಿತ್ವ ಅಗತ್ಯ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಬಾಹ್ಯಾಕಾಶ ಕ್ಷೇತ್ರದಂತೆ ಪರಮಾಣು ಕ್ಷೇತ್ರದಲ್ಲಿಯೂ ಖಾಸಗಿ ವಲಯಕ್ಕೆ ಹೆಚ್ಚಿನ ಅವಕಾಶಗಳನ್ನು ನೀಡುವತ್ತ ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ಅವರು ತಿಳಿಸಿದರು.
ದೇಶದ ಅಭಿವೃದ್ಧಿಯ ಗುರಿ ಸಾಧಿಸಬೇಕಾದರೆ ಸರ್ಕಾರ ಮತ್ತು ಕೈಗಾರಿಕೆಗಳು ಪರಸ್ಪರ ಅನುಭವಗಳನ್ನು ಹಂಚಿಕೊಳ್ಳಬೇಕು, ಹೊಸ ಆಲೋಚನೆಗಳನ್ನು ಸ್ವೀಕರಿಸಬೇಕು ಹಾಗೂ ಅಗತ್ಯವಿದ್ದರೆ ಹಳೆಯ ಪರಿಕಲ್ಪನೆಗಳನ್ನು ಬದಲಾಯಿಸಲು ಸಿದ್ಧರಾಗಬೇಕು. ಇದೇ ಭಾರತದ ಮುಂದಿನ ಬೆಳವಣಿಗೆಗೆ ಬಲವಾದ ಅಡಿಪಾಯವಾಗಲಿದೆ ಎಂದು ಅವರು ಹೇಳಿದರು.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
