ಭಾರತದಲ್ಲಿ Apple TV 4K ಹೊಸ ಆವೃತ್ತಿ ಬಿಡುಗಡೆ: Siri AI ಸೇರಿದಂತೆ ಹಲವು ಆಕರ್ಷಕ ಫೀಚರ್ಸ್

ಟೆಕ್ ದಿಗ್ಗಜ Apple ಸಂಸ್ಥೆ ತನ್ನ ಹೋಮ್‌ ಎಂಟರ್‌ಟೈನ್ಮೆಂಟ್ ಡಿವೈಸ್‌ಗಳ ಸರಣಿಗೆ ಹೊಸ ಸೇರ್ಪಡೆಯಾಗಿ ನಾಲ್ಕನೇ ತಲೆಮಾರಿನ Apple TV 4K ಅನ್ನು ಪರಿಚಯಿಸಿದೆ. ಈ ಡಿವೈಸ್‌ A19 ಚಿಪ್‌ನಿಂದ ಕಾರ್ಯನಿರ್ವಹಿಸಲಿದ್ದು, ಹ್ಯಾಂಡ್ಸ್-ಫ್ರೀ ವಾಯ್ಸ್ ಕಂಟ್ರೋಲ್ ಸೌಲಭ್ಯವನ್ನು ಹೊಂದಿದೆ. ಇದರಲ್ಲಿರುವ ಹೊಸ Siri AI ಅನುಭವದ ಮೂಲಕ ಬಳಕೆದಾರರು ತಮಗೆ ಬೇಕಾದ ಸಿನಿಮಾ, ಟಿವಿ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಂಟೆಂಟ್‌ಗಳನ್ನು ಸುಲಭವಾಗಿ ಹುಡುಕಬಹುದು. ಅಲ್ಲದೇ ಆಪಲ್ ಟಿವಿ 4K ನಲ್ಲಿ ಆಪಲ್ ಫಿಟ್‌ನೆಸ್+, ಆಪಲ್ ಆರ್ಕೇಡ್, ಫೇಸ್‌ಟೈಮ್ ಮೂಲಕ ಕಂಟಿನ್ಯೂಟಿ ಕ್ಯಾಮೆರಾ ಮತ್ತು ವೈಯಕ್ತಿಕಗೊಳಿಸಿದ ಫೋಟೋ ಸ್ಕ್ರೀನ್‌ಸೇವರ್‌ಗಳನ್ನು ಬೆಂಬಲಿಸುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Apple HomeView ಮತ್ತು HomePod mini 2 ಘೋಷಣೆ: ಭಾರತದಲ್ಲಿ ಬೆಲೆ ಹಾಗೂ ಲಭ್ಯತೆ ಮಾಹಿತಿ ಇಲ್ಲಿದೆ

Apple TV 4K 2026: ಲಭ್ಯತೆ ಹಾಗೂ ಬೆಲೆ

ಆಪಲ್‌ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಿರುವ Apple TV 4K (4ನೇ ತಲೆಮಾರು) ಡಿವೈಸ್‌ ಬೆಲೆಯು ಭಾರತದಲ್ಲಿ 39,900 ರೂ.ಗಳು ಆಗಿದೆ. ಈ ಡಿವೈಸ್ ನವೆಂಬರ್ 13 ರಿಂದ ಮಾರಾಟಕ್ಕೆ ಲಭ್ಯ.

ಆಪಲ್‌ TV 4K ಫೀಚರ್ಸ್‌ ಹೀಗಿವೆ

ಆಪಲ್‌ನ ಹೊಸ Apple TV 4K (4ನೇ ತಲೆಮಾರು) A19 ಚಿಪ್‌ನಿಂದ ಕಾರ್ಯನಿರ್ವಹಿಸುತ್ತದೆ. ಕಂಪನಿಯ ಪ್ರಕಾರ ಹಿಂದಿನ ತಲೆಮಾರಿನ ಸಾಧನಕ್ಕೆ ಹೋಲಿಸಿದರೆ ಇದರ CPU ಕಾರ್ಯಕ್ಷಮತೆ ಶೇ. 50ರಷ್ಟು ಹೆಚ್ಚಿದ್ದು, GPU ಕಾರ್ಯಕ್ಷಮತೆ ಎರಡು ಪಟ್ಟು ಸುಧಾರಿಸಿದೆ. ಇದರಿಂದ ಆಪ್‌ನಗಳನ್ನು ಬಳಸುವುದು ಮತ್ತು ಕಂಟೆಂಟ್‌ಗಳನ್ನು ವೀಕ್ಷಿಸುವುದು ಹೆಚ್ಚು ವೇಗವಾಗಿ ನಡೆಯಲಿದೆ. ಅಲ್ಲದೆ, ವೀಡಿಯೊ ಸ್ಟ್ರೀಮಿಂಗ್‌ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಇದರಲ್ಲಿ ಪ್ರತ್ಯೇಕ AV1 ಡಿಕೋಡರ್‌ ಅನ್ನು ನೀಡಲಾಗಿದೆ. ಈ ಡಿವೈಸ್‌ನ ಪ್ರಮುಖ ಆಕರ್ಷಣೆಗಳಲ್ಲಿ Siri AI ಕೂಡ ಒಂದು. ಇದರ ಸಹಾಯದಿಂದ ಬಳಕೆದಾರರು ತಮಗೆ ಬೇಕಾದ ಸಿನಿಮಾ, ಟಿವಿ ಕಾರ್ಯಕ್ರಮಗಳು ಮತ್ತು ಇತರ ಕಂಟೆಂಟ್‌ಗಳನ್ನು ಧ್ವನಿ ಆಜ್ಞೆಗಳ ಮೂಲಕ ಹುಡುಕಬಹುದು.

ಧ್ವನಿ ಆಜ್ಞೆಗಳನ್ನು ಸುಲಭವಾಗಿ ಸ್ವೀಕರಿಸಲು ಆಪಲ್‌ TV 4K ನಲ್ಲಿ ಮೂರು ಅಂತರ್ನಿರ್ಮಿತ ಫಾರ್-ಫೀಲ್ಡ್ ಮೈಕ್ರೊಫೋನ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಡಿವೈಸ್‌ನ ಹತ್ತಿರ ಹೋಗಿ ಮಾತನಾಡುವ ಅಗತ್ಯವಿಲ್ಲದೆ ದೂರದಿಂದಲೇ ಧ್ವನಿ ಮೂಲಕ ನಿಯಂತ್ರಿಸಬಹುದು. ಇದರೊಂದಿಗೆ ನವೀಕರಿಸಿದ ರಿಮೋಟ್‌ ಕೂಡ ಲಭ್ಯವಿದೆ. ರಿಮೋಟ್ ಎಲ್ಲಿದೆ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಲು Precision Finding ಮತ್ತು ಆಪಲ್‌ನ ಫೈಂಡ್‌ ಮೈ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರಿಂದ ಮನೆಯೊಳಗೆ ರಿಮೋಟ್ ಕಳೆದುಹೋದಾಗ ಅದನ್ನು ಹುಡುಕುವುದು ಸುಲಭವಾಗಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :