ದುಬಾರಿ ರೋಮಿಂಗ್ ಚಾರ್ಜ್ಗೆ ಗುಡ್ಬೈ! WhatsApp ನಿಂದ ಬರಲಿದೆ Travel eSIM ಸೌಲಭ್ಯ
ವಿದೇಶ ಪ್ರವಾಸಕ್ಕೆ ತೆರಳುವಾಗ ಮೊಬೈಲ್ ಇಂಟರ್ನೆಟ್ ಸಂಪರ್ಕ ಪಡೆಯುವುದು ಕೆಲವರಿಗೆ ದೊಡ್ಡ ಸವಾಲಾಗಿರುತ್ತದೆ. ಸ್ಥಳೀಯ ಸಿಮ್ ಕಾರ್ಡ್ ಖರೀದಿಸುವುದು, ದುಬಾರಿ ಅಂತರರಾಷ್ಟ್ರೀಯ ರೋಮಿಂಗ್ ಪ್ಲಾನ್ಗಳನ್ನು ಬಳಸುವುದು ಅಥವಾ ವಿಮಾನ ನಿಲ್ದಾಣದ ಸಾರ್ವಜನಿಕ Wi-Fi ಮೇಲೆ ಅವಲಂಬಿತರಾಗುವುದು ಅನಿವಾರ್ಯವಾಗುತ್ತದೆ. ಆದರೆ ಈ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ WhatsApp ಹೊಸ ಆಯ್ಕೆಯೊಂದನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ವರದಿಗಳ ಪ್ರಕಾರ ವಾಟ್ಸಾಪ್ 'Travel eSIM' ಎಂಬ ಹೊಸ ಸೌಲಭ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಮೂಲಕ ಬಳಕೆದಾರರು ತಾವು ಪ್ರಯಾಣಿಸುವ ದೇಶಕ್ಕೆ ಅನುಗುಣವಾಗಿ ಡೇಟಾ ಪ್ಲಾನ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ವಾಟ್ಸಾಪ್ ಆಪ್ನಿಂದಲೇ eSIM ಖರೀದಿಸಿ ಇನ್ಸ್ಟಾಲ್ ಮಾಡುವ ಮತ್ತು ಡೇಟಾ ಬಳಕೆಯನ್ನು ಪರಿಶೀಲಿಸುವ ಅವಕಾಶವೂ ಸಿಗಬಹುದು.
ಏನಿದು WhatsApp Travel eSIM ವೈಶಿಷ್ಟ್ಯ?
Travel eSIM ಸೌಲಭ್ಯವು ವಿದೇಶ ಪ್ರವಾಸದ ಸಮಯದಲ್ಲಿ ಮೊಬೈಲ್ ಡೇಟಾ ಬಳಸುವುದನ್ನು ಸರಳಗೊಳಿಸುವ ಉದ್ದೇಶ ಹೊಂದಿದೆ. ಬಳಕೆದಾರರು ತಾವು ಭೇಟಿ ನೀಡಲಿರುವ ದೇಶಕ್ಕೆ ಲಭ್ಯವಿರುವ ಡೇಟಾ ಪ್ಲಾನ್ಗಳನ್ನು ವಾಟ್ಸಾಪ್ನಲ್ಲೇ ಹುಡುಕಿ ಖರೀದಿಸಬಹುದು. ನಂತರ eSIM ಅನ್ನು ನೇರವಾಗಿ ಸ್ಮಾರ್ಟ್ಫೋನ್ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಹುದು.
ಪ್ರವಾಸಕ್ಕೆ ಹೊರಡುವ ಮೊದಲೇ eSIM ಇನ್ಸ್ಟಾಲ್ ಮಾಡಿಕೊಂಡು, ಗಮ್ಯಸ್ಥಾನವನ್ನು ತಲುಪಿದ ಬಳಿಕ ಅದನ್ನು ಸಕ್ರಿಯಗೊಳಿಸುವ ಆಯ್ಕೆಯೂ ಲಭ್ಯವಾಗುವ ಸಾಧ್ಯತೆಯಿದೆ. ಇದರಿಂದ ವಿದೇಶಕ್ಕೆ ತಲುಪಿದ ತಕ್ಷಣವೇ ಇಂಟರ್ನೆಟ್ ಸಂಪರ್ಕ ಪಡೆಯಲು ಅನುಕೂಲವಾಗುತ್ತದೆ. ಈ ಆಯ್ಕೆಗಾಗಿ ವಾಟ್ಸಾಪ್ ವಿವಿಧ eSIM ಪೂರೈಕೆದಾರರು ಮತ್ತು ಟೆಲಿಕಾಂ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದುವ ಕೆಲಸ ಮಾಡುತ್ತಿದೆ. ಈ ಪಾಲುದಾರರಲ್ಲಿ ಭಾರತದ ಜಿಯೋ (Jio) ಸೇರಿದಂತೆ Smart Axiata, Smart Communications ಮತ್ತು Verizon ಸಂಸ್ಥೆಗಳ ಹೆಸರು ವರದಿಗಳಲ್ಲಿ ಕಾಣಿಸಿಕೊಂಡಿವೆ.
ದುಬಾರಿ ರೋಮಿಂಗ್ ಶುಲ್ಕದಿಂದ ಮುಕ್ತಿ ಸಿಗುತ್ತದೆಯೇ?
ವಿದೇಶ ಪ್ರವಾಸದ ವೇಳೆ ಭಾರತೀಯ ಮೊಬೈಲ್ ಸಂಖ್ಯೆಯಲ್ಲಿ ಅಂತರರಾಷ್ಟ್ರೀಯ ರೋಮಿಂಗ್ ಬಳಸಿದರೆ ಕೆಲವೊಮ್ಮೆ ಹೆಚ್ಚಿನ ವೆಚ್ಚವಾಗಬಹುದು. ಮತ್ತೊಂದೆಡೆ, ವಿದೇಶದಲ್ಲಿ ಸ್ಥಳೀಯ ಸಿಮ್ ಖರೀದಿಸಲು ಸಮಯ ವ್ಯಯಿಸಬೇಕಾಗುತ್ತದೆ. ವಾಟ್ಸಾಪ್ನ Travel eSIM ಸೌಲಭ್ಯ ಲಭ್ಯವಾದರೆ, ಪ್ರಯಾಣಿಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಡೇಟಾ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ದುಬಾರಿ ರೋಮಿಂಗ್ ಪ್ಲಾನ್ಗಳ ಮೇಲಿನ ಅವಲಂಬನೆ ಕಡಿಮೆಯಾಗುವ ಸಾಧ್ಯತೆಯಿದೆ. ವಿಮಾನ ನಿಲ್ದಾಣದಲ್ಲಿ Wi-Fi ಹುಡುಕುವ ಅಥವಾ ಸ್ಥಳೀಯ ಸಿಮ್ಗಾಗಿ ಕಾಯುವ ಅಗತ್ಯವೂ ತಪ್ಪಬಹುದು.
ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, Travel eSIM ಬಳಸಿದರೂ ಬಳಕೆದಾರರು ತಮ್ಮ ಈಗಿನ ಫೋನ್ ಸಂಖ್ಯೆಯೊಂದಿಗೆ ವಾಟ್ಸಾಪ್ ಬಳಸುವುದನ್ನು ಮುಂದುವರಿಸಬಹುದು. ಡೇಟಾ ಸಂಪರ್ಕಕ್ಕಾಗಿ ಪ್ರತ್ಯೇಕ eSIM ಬಳಸುವುದರಿಂದ ವಾಟ್ಸಾಪ್ ಖಾತೆಗೆ ಲಿಂಕ್ ಆಗಿರುವ ಸಂಖ್ಯೆಯನ್ನು ಬದಲಾಯಿಸುವ ಅಗತ್ಯವಿರುವುದಿಲ್ಲ.
ಯಾವಾಗ ಲಭ್ಯವಾಗಲಿದೆ?
ವಾಟ್ಸಾಪ್ ಈ ಆಯ್ಕೆಯನ್ನು ಆಯ್ದ ದೇಶಗಳಲ್ಲಿ ಹಂತ ಹಂತವಾಗಿ ಪರಿಚಯಿಸಲು ಯೋಜಿಸುತ್ತಿದೆ ಎನ್ನಲಾಗಿದೆ. ಆದರೆ ಭಾರತ ಸೇರಿದಂತೆ ಯಾವ ದೇಶಗಳಲ್ಲಿ ಮೊದಲು ಈ ಸೇವೆ ಲಭ್ಯವಾಗಲಿದೆ ಎಂಬುದನ್ನು ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ. ಅಲ್ಲದೆ, Travel eSIM ಪ್ಲಾನ್ಗಳ ಬೆಲೆ, ಡೇಟಾ ಮಿತಿ, ಮಾನ್ಯತೆ ಮತ್ತು ಬೆಂಬಲಿತ ದೇಶಗಳ ಕುರಿತ ಸಂಪೂರ್ಣ ಮಾಹಿತಿಯೂ ಇನ್ನೂ ಬಹಿರಂಗವಾಗಿಲ್ಲ.
ಪ್ರಯಾಣಿಕರಿಗೆ ಹೇಗೆ ಉಪಯುಕ್ತ?
ಪ್ರಸ್ತುತ ಅನೇಕರು ವಿಮಾನ ಟಿಕೆಟ್ ವಿವರಗಳನ್ನು ಹಂಚಿಕೊಳ್ಳಲು, ವಿಮಾನ ನಿಲ್ದಾಣದಿಂದ ಪಿಕಪ್ ವ್ಯವಸ್ಥೆ ಮಾಡಿಕೊಳ್ಳಲು, ಹೋಟೆಲ್ ವಿಳಾಸ ಕಳುಹಿಸಲು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು ವಾಟ್ಸಾಪ್ ಬಳಸುತ್ತಾರೆ. ಇಂತಹ ಸಂದರ್ಭಗಳಲ್ಲಿ ವಿದೇಶದಲ್ಲಿಯೂ ನಿರಂತರ ಇಂಟರ್ನೆಟ್ ಸಂಪರ್ಕವಿದ್ದರೆ ಪ್ರಯಾಣ ಮತ್ತಷ್ಟು ಸುಲಭವಾಗುತ್ತದೆ.
ಒಟ್ಟಾರೇ, ವಾಟ್ಸಾಪ್ನ Travel eSIM ವೈಶಿಷ್ಟ್ಯ ಜಾರಿಗೆ ಬಂದರೆ ವಿದೇಶ ಪ್ರವಾಸಿಗರಿಗೆ ಅನುಕೂಲವಾಗುವ ಹೊಸ ಸೌಲಭ್ಯವಾಗಬಹುದು. ವಿಶೇಷವಾಗಿ ಸ್ಥಳೀಯ ಸಿಮ್ ಖರೀದಿಸುವ ತೊಂದರೆ ತಪ್ಪಿಸಿಕೊಳ್ಳಲು ಬಯಸುವವರಿಗೆ ಇದು ಸಹಾಯಕವಾಗುವ ನಿರೀಕ್ಷೆಯಿದೆ. ಆದರೆ ಇದರ ನಿಖರ ಬೆಲೆ, ಲಭ್ಯತೆ ಮತ್ತು ಸೇವಾ ವ್ಯಾಪ್ತಿಯ ಬಗ್ಗೆ ಅಧಿಕೃತ ಘೋಷಣೆ ಹೊರಬಂದ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿಯಲಿದೆ