ದೇಶದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆಯಾದ Bharat Taxi ಅಪ್ಲಿಕೇಶನ್ ಇಂದು (ಫೆಬ್ರವರಿ 5) ಬಿಡುಗಡೆ ಆಗಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು Bharat Taxi ಸೇವೆಗಳನ್ನು ಅಧಿಕೃತವಾಗಿ ಉದ್ಘಾಟಿಸಿದರು. ದೇಶದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆಯಾದ Bharat Taxi ವೇದಿಕೆಯನ್ನು ಸಹಕಾರ್ ಟ್ಯಾಕ್ಸಿ ಸಹಕಾರಿ ಲಿಮಿಟೆಡ್ (STCL) ನಿರ್ವಹಿಸುತ್ತದೆ. ಇದು ಹೆಚ್ಚಿನ ಕಮಿಷನ್‌ಗೆ ಬ್ರೇಕ್ ಹಾಕುವ ಉದ್ದೇಶ ಹೊಂದಿದ್ದು, ಪ್ರಯಾಣಿಕರ ಪಾವತಿಯು ಪೂರ್ಣವಾಗಿ ಚಾಲಕರಿಗೆ ಹೋಗುವುದನ್ನು ಖಚಿತಪಡಿಸುತ್ತದೆ. ಅಪ್ಲಿಕೇಶನ್‌ನ ಸೇವೆಗಳು, ಪ್ರಯೋಜನಗಳು ಮತ್ತು ಪ್ರಮುಖ ವೈಶಿಷ್ಟ್ಯಗಳ ಕುರಿತು ಇನ್ನಷ್ಟು ಓದಿ.
Also Read : Vivo V50 5G ಮೊಬೈಲ್ ಈಗ ಕಡಿಮೆ ಬೆಲೆಗೆ ಲಭ್ಯ! ಡ್ಯುಯಲ್ ಕ್ಯಾಮೆರಾ, ಬಿಗ್ ಬ್ಯಾಟರಿ ಫೀಚರ್ಸ್ ಇವೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೆಬ್ರವರಿ 5 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತದ ಮೊದಲ ಸಹಕಾರಿ ವಲಯದ Taxi ಸೇವೆಯಾದ Bharat Taxi ಯೋಜನೆಗೆ ಚಾಲನೆ ನೀಡಿದರು. ಹೊಸ Bharat Taxi ಅಪ್ಲಿಕೇಶನ್ ಸಹಕಾರಿ ವೇದಿಕೆಯಲ್ಲಿ ಕಾರ್ಯ ನಿರ್ವಹಿಸುತ್ತದೆ ಹಾಗೂ ಪ್ರಯಾಣಿಕರಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸುವ ಉದ್ದೇಶದೊಂದಿಗೆ ಚಾಲನೆ ಆಗಿದೆ. ಆರಂಭದಲ್ಲಿ ಈ ಸೇವೆಯನ್ನು ದೆಹಲಿ-NRC ಯಲ್ಲಿ ಪ್ರಾರಂಭಿಸಲಾಗುತ್ತಿದೆ. ಆ ಬಳಿಕ ಮುಂಬೈ, ಬೆಂಗಳೂರು ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಹಂತ ಹಂತವಾಗಿ ವಿಸ್ತರಿಸುವ ಯೋಜನೆಗಳು ಇವೆ ಎನ್ನಲಾಗಿದೆ.
Bharat Taxi ಸೇವೆಯು ಸಹಕಾರ್ ಟ್ಯಾಕ್ಸಿ ಕೋ-ಆಪರೇಟಿವ್ ಲಿಮಿಟೆಡ್ ಒದಗಿಸುವ ಆಪ್ ಆಧಾರಿತ ಟ್ಯಾಕ್ಸಿ ಸೇವೆ ಆಗಿದೆ. ಈ ಸೇವೆಯು ಸ್ವತಂತ್ರ ಸಹಕಾರಿಯಾಗಿದ್ದರೂ, ಇದು ಭಾರತ ಸರ್ಕಾರದಿಂದ ಕಾರ್ಯತಂತ್ರದ ಬೆಂಬಲವನ್ನು ಪಡೆದಿದೆ. ಈ ನೂತನ ಸೇವೆಯು ಹೆಚ್ಚಿನ ಕಮಿಷನ್‌ಗಳನ್ನು ತೆಗೆದುಹಾಕುವ ಉದ್ದೇಶ ಹೊಂದಿದ್ದು, ಚಾಲಕರಿಗೆ ಪೂರ್ಣ ಪಾವತಿ ಒದಗಿಸುವ ಗುರಿಯನ್ನು ಹೊಂದಿದೆ. ಭಾರತ್ ಟ್ಯಾಕ್ಸಿಯಲ್ಲಿ ಡ್ರೈವರ್ಗಳೇ ಮಾಲೀಕರು ತತ್ವದಲ್ಲಿ ಕೆಲಸ. ಅಂದಹಾಗೆ Bharat Taxi ಆಪ್‌ನಲ್ಲಿ ಈಗಾಗಲೇ 3,00,000 ಕ್ಕೂ ಅಧಿಕ ಚಾಲಕರು ಮತ್ತು 1,00,000 ಕ್ಕೂ ಅಧಿಕ ಬಳಕೆದಾರರು ನೋಂದಾಯಿಸಿಕೊಂಡಿದ್ದಾರೆ.
ದೇಶದ ಮೆಟ್ರೋ ನಗರಗಳಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಗಳು ಜನಪ್ರಿಯತೆ ಪಡೆದಿವೆ. ಆ ಪೈಕಿ Ola, Uber ಮತ್ತು Rapido ಆಪ್ ಆಧಾರಿತ ಸಾರಿಗೆ ಸೇವೆಗಳು ಕೆಲವು ವರ್ಷಗಳಿಂದ ಬಳಕೆಯಲ್ಲಿವೆ. ನಗರಗಳಲ್ಲಿ ಈಗಾಗಲೇ ಚಾಲ್ತಿ ಇರುವ Ola, Uber ಮತ್ತು Rapido ಆಪ್ ಜನಪ್ರಿಯತೆಯನ್ನು ತಗ್ಗಿಸಲು ಹೊಸ Bharat Taxi ಆಪ್ ಆಧಾರಿತ ಟ್ಯಾಕ್ಸಿ ಸೇವೆಯು ಕೆಲಸ ಮಾಡಲಿದೆ.
Bharat Taxi ಸೇವೆಯು ರಿಯಾಯಿತಿ ದರದಲ್ಲಿ ಟ್ಯಾಕ್ಸಿ ಸೇವೆ ಒದಗಿಸುವ ಉದ್ದೇಶ ಹೊಂದಿದ ಯೋಜನೆ ಆಗಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಚಾಲ್ತಿ ಇರುವ ಆಪ್ ಆಧಾರಿತ ಟ್ಯಾಕ್ಸಿ ಸೇವೆಗಳಾದ Ola, Uber ಮತ್ತು Rapido ಗಳು ನಿಗದಿಪಡಿಸದ ಮಾರುಕಟ್ಟೆ ಬೆಲೆಗಿಂತ ಶೇ 20 ರಿಂದ 30% ನಷ್ಟು ಕಡಿಮೆ ಬೆಲೆಯಲ್ಲಿ ಸೇವೆ ನೀಡುವ ಗುರಿಯನ್ನು Bharat Taxi ಯೋಜನೆ ಹೊಂದಿದೆ. ಅಲ್ಲದೇ ಯಾವುದೇ ಕಮಿಷನ್ ಅಥವಾ ಸರ್ಜ್ ಶುಲ್ಕಗಳು ಇರುವುದಿಲ್ಲ ಎಂದು ವರದಿಯಾಗಿದೆ.