SIR: ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕೈಬಿಟ್ಟಿದ್ದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಹಲವು ಮತದಾರರ ಹೆಸರುಗಳು ವಿವಿಧ ಕಾರಣಗಳಿಂದ ಕೈಬಿಡಲಾಗಿದೆ. ನಿಮ್ಮ ಹೆಸರು ಕೂಡ ಕರಡು ಪಟ್ಟಿಯಲ್ಲಿ ಕಾಣಿಸದಿದ್ದರೆ ಆತಂಕಪಡುವ ಅಗತ್ಯವಿಲ್ಲ. ನಿಗದಿತ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸುವ ಮೂಲಕ ಅಥವಾ ಅಗತ್ಯವಿರುವ ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬಹುದು. ಹಾಗಾದರೆ, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಏಕೆ ಕೈಬಿಡಲಾಗಿದೆ? ಹೆಸರು ಪರಿಶೀಲಿಸುವುದು ಹೇಗೆ? ಹೆಸರು ಇಲ್ಲದಿದ್ದರೆ ಯಾವ ಫಾರಂನಲ್ಲಿ ಅರ್ಜಿ ಸಲ್ಲಿಸಬೇಕು? ಈ ಎಲ್ಲ ಪ್ರಶ್ನೆಗಳಿಗೆ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಯೋಣ.
SurveyAlso Read : Karnataka SIR: ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಲು ಹೀಗೆ ಮಾಡಿ
SIR: ತಿದ್ದುಪಡಿ ಅರ್ಜಿ ಸಲ್ಲಿಸಲು ಅವಕಾಶ
ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಅಥವಾ ತಿದ್ದುಪಡಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 23 ರ ವರೆಗೆ ಅವಕಾಶ ನೀಡಲಾಗಿದೆ. ವಿವಿಧ ಕಾರಣಗಳಿಂದ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವವರು ಸೂಕ್ತ ದಾಖಲೆ ಅಥವಾ ಕಾರಣಗಳನ್ನು ನೀಡಿ ಮತ್ತೆ ತಮ್ಮ ಹೆಸರನ್ನು ಸೇರ್ಪಡೆ ಮಾಡಿಸಿಕೊಳ್ಳಬಹುದು. ಇದಕ್ಕಾಗಿ ಅಗತ್ಯವಿರುವ ಫಾರಂ 6 ಅಥವಾ ಫಾರಂ 8 ಅನ್ನು ಬಳಸಬಹುದಾಗಿದೆ. ಒಂದು ವೇಳೆ ನಿಮ್ಮ ಬೂತ್‌ನ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ನಿಗದಿತ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸಿ ಮತ್ತೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

SIR ಪ್ರಮುಖ ದಿನಾಂಕಗಳು
ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಅರ್ಹತಾ ದಿನಾಂಕ 1 ಅಕ್ಟೋಬರ್ 2026 ಆಗಿದ್ದು, ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 24ರಿಂದ ಸೆಪ್ಟೆಂಬರ್ 23, 2026 ರ ವರೆಗೆ ಅವಕಾಶವಿದೆ. ಈ ಅವಧಿಯಲ್ಲಿ ಸಲ್ಲಿಸಲಾದ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಾಗೂ ನೋಟಿಸ್ ಪ್ರಕ್ರಿಯೆ ಆಗಸ್ಟ್ 24 ರಿಂದ ಅಕ್ಟೋಬರ್ 22, 2026 ರ ವರೆಗೆ ನಡೆಯಲಿದೆ. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಅಕ್ಟೋಬರ್ 27, 2026 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
ಚುನಾವಣಾ ಆಯೋಗದ ಫಾರಂ ಮಾಹಿತಿ
ಫಾರಂ 6: 18 ವರ್ಷ ಪೂರ್ಣಗೊಂಡಿರುವ ಅಥವಾ ಪೂರ್ಣಗೊಳ್ಳಲಿರುವ ಹೊಸ ಮತದಾರರ ಹೆಸರು ಸೇರ್ಪಡೆಗೆ ಬಳಸಲಾಗುತ್ತದೆ. ಸ್ಥಳಾಂತರಗೊಂಡವರು ಅಥವಾ ಗಣತಿ ಸಂದರ್ಭದಲ್ಲಿ ಹೆಸರು ಸೇರ್ಪಡೆಯಾಗದೆ ಉಳಿದವರೂ ಅಗತ್ಯ ಸ್ವಯಂ ಘೋಷಣೆಯೊಂದಿಗೆ ಈ ಫಾರಂ ಮೂಲಕ ಅರ್ಜಿ ಸಲ್ಲಿಸಬಹುದು.
ಫಾರಂ 7: ಮತದಾರರ ಪಟ್ಟಿಯಲ್ಲಿರುವ ಅನರ್ಹ ಅಥವಾ ತಪ್ಪಾಗಿ ಸೇರ್ಪಡೆಯಾದ ಹೆಸರನ್ನು ತೆಗೆದುಹಾಕಲು ಆಕ್ಷೇಪಣೆ ಸಲ್ಲಿಸಲು ಬಳಸಲಾಗುತ್ತದೆ.
ಫಾರಂ 8: ಮತದಾರರ ಗುರುತಿನ ಚೀಟಿ ಹಾಗೂ ಮತದಾರರ ಪಟ್ಟಿಯಲ್ಲಿರುವ ವಿವರಗಳಲ್ಲಿ ತಿದ್ದುಪಡಿ ಅಥವಾ ಬದಲಾವಣೆ ಮಾಡಲು ಬಳಸಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮತದಾರರು ತಮ್ಮ ಅರ್ಜಿಯನ್ನು ಸಂಬಂಧಪಟ್ಟ ERO, AERO ಅಥವಾ BLO ಅವರಿಗೆ ನೇರವಾಗಿ ಸಲ್ಲಿಸಬಹುದು. ಇದರ ಜೊತೆಗೆ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸುವ ಅವಕಾಶವಿದೆ. ಆನ್‌ಲೈನ್‌ನಲ್ಲಿ voters.eci.gov.in ವೆಬ್‌ಸೈಟ್ ಅಥವಾ ECINET App ಮೂಲಕ ಅಗತ್ಯ ಅರ್ಜಿಗಳನ್ನು ಸಲ್ಲಿಸಬಹುದು.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
