Google I/O 2026: ಜೆಮಿನಿ AI ಆಧಾರಿತ ಆಂಡ್ರಾಯ್ಡ್‌ XR ಸ್ಮಾರ್ಟ್‌ ಗ್ಲಾಸ್‌ಗಳ ಅನಾವರಣ

HIGHLIGHTS

ಜೆಮಿನಿ AI ಚಾಲಿತ ಆಂಡ್ರಾಯ್ಡ್‌ XR ಸ್ಮಾರ್ಟ್‌ ಗ್ಲಾಸ್‌ಗಳ ಅನಾವರಣ

ಈ ಸ್ಮಾರ್ಟ್‌ ಗ್ಲಾಸ್‌ಗಳು ಬಳಕೆದಾರರಿಗೆ ವಾಯ್ಸ್‌ ಅಸಿಸ್ಟಂಟ್‌ ಅನ್ನು ಒದಗಿಸಲಿವೆ

ಇವು ಆಡಿಯೊ ಗ್ಲಾಸ್‌ಗಳ ಮತ್ತು ಡಿಸ್‌ಪ್ಲೇ ಗ್ಲಾಸ್‌ಗಳ ಮಾದರಿಯಲ್ಲಿ ಲಭ್ಯ

Google I/O 2026: ಗೂಗಲ್ I/O 2026 ರ ಕಾರ್ಯಕ್ರಮದಲ್ಲಿ ಟೆಕ್ ದೈತ್ಯ ಗೂಗಲ್ ಮತ್ತು ಸ್ಯಾಮ್‌ಸಂಗ್ ಕಂಪನಿಗಳು ತಮ್ಮ ಮುಂದಿನ ಪೀಳಿಗೆಯ ಸ್ಮಾರ್ಟ್ ಗ್ಲಾಸ್‌ಗಳನ್ನು ಪ್ರದರ್ಶಿಸಿದವು. ಅಂದಹಾಗೆ ಕಂಪನಿಗಳು ಎರಡು ವರ್ಗಗಳ AI ಚಾಲಿತ ಗ್ಲಾಸ್‌ಗಳನ್ನು ಘೋಷಿಸಿದ್ದು, ಅವುಗಳು ಕ್ರಮವಾಗಿ ಆಡಿಯೊ ಗ್ಲಾಸ್‌ಗಳು ಮತ್ತು ಡಿಸ್ಪ್ಲೇ ಗ್ಲಾಸ್‌ಗಳು ಆಗಿವೆ. ಇನ್ನು ಈ ಎರಡೂ ಮಾದರಿಯ ಜೆಮಿನಿ AI ಯಲ್ಲಿ ಕಾರ್ಯನಿರ್ವಹಿಸುತ್ತವೆ. ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ನಿರಂತರವಾಗಿ ನೋಡುವ ಅಗತ್ಯ ಇರುವುದಿಲ್ಲ. ಬಳಕೆದಾರರು ಹ್ಯಾಂಡ್ಸ್-ಫ್ರೀ ಆಗಿ ಫೋನ್ ಬಳಕೆ ಮಾಡುವ ಉದ್ದೇಶವನ್ನು ಈ ಸ್ಮಾರ್ಟ್ ಗ್ಲಾಸ್‌ಗಳು ಹೊಂದಿವೆ.

Also Read : Google I/O 2026: AI ವಿಡಿಯೋಗಳಿಗೆ ಜೆಮಿನಿ ಓಮ್ನಿ ಘೋಷಣೆ; ಹೊಸ ಅವತಾರದಲ್ಲಿ Gemini

Google I/O 2026: ಸ್ಮಾರ್ಟ್ ಗ್ಲಾಸ್‌ಗಳು

ಗೂಗಲ್‌ ತನ್ನ ಹೊಸ ಜೆಮಿನಿ AI ಆಧಾರಿತ ಆಂಡ್ರಾಯ್ಡ್ XR ಸ್ಮಾರ್ಟ್‌ ಗ್ಲಾಸ್‌ಗಳ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಂಡಿದೆ. ಕಂಪನಿಯ ಪ್ರಕಾರ ಈ ಸ್ಮಾರ್ಟ್‌ ಗ್ಲಾಸ್‌ಗಳು ಎರಡು ವಿಭಾಗಗಳಲ್ಲಿ ಲಭ್ಯವಾಗಲಿವೆ. ಮೊದಲ ವಿಭಾಗದಲ್ಲಿ ರೇ-ಬ್ಯಾನ್ ಮೆಟಾ ಗ್ಲಾಸ್‌ಗಳಂತೆಯೇ ಆಡಿಯೊ ಆಧಾರಿತ ಗ್ಲಾಸ್‌ಗಳು ಇರಲಿವೆ. ಇವು ಅಂತರ್ನಿರ್ಮಿತ ಸ್ಪೀಕರ್‌ಗಳ ಮೂಲಕ ಬಳಕೆದಾರರಿಗೆ ವಾಯ್ಸ್‌ ಅಸಿಸ್ಟಂಟ್‌ ಅನ್ನು ಒದಗಿಸಲಿವೆ. ಹಾಗೆಯೇ ಇನ್ನೊಂದು ವಿಭಾಗದಲ್ಲಿ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ ಗ್ಲಾಸ್‌ಗಳು ಇವೆ. ಇವು ಬಳಕೆದಾರರ ಮುಂದೆ ನೇರವಾಗಿ ಅಗತ್ಯ ಮಾಹಿತಿ ಮತ್ತು ದೃಶ್ಯ ವಿವರಗಳನ್ನು ತೋರಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಗೂಗಲ್‌ ಮಾಹಿತಿಯಂತೆ, ಮೊದಲ ಹಂತದಲ್ಲಿ ಆಡಿಯೊ-ಕೇಂದ್ರಿತ ಸ್ಮಾರ್ಟ್‌ ಗ್ಲಾಸ್‌ಗಳು ಈ ವರ್ಷದ ಕೊನೆಯಲ್ಲಿ ಮಾರುಕಟ್ಟೆಗೆ ಬರಲಿವೆ. ಇದರೊಂದಿಗೆ ಆರಂಭಿಕ ಶ್ರೇಣಿಯ ಸ್ಮಾರ್ಟ್‌ ಗ್ಲಾಸ್‌ಗಳಿಗಾಗಿ ಜೆಂಟಲ್ ಮಾನ್ಸ್ಟರ್ ಮತ್ತು ವಾರ್ಬಿ ಪಾರ್ಕರ್ ಕಂಪನಿಗಳ ಜೊತೆಗೆ ಗೂಗಲ್‌ ಪಾಲುದಾರಿಕೆ ಮಾಡಿಕೊಂಡಿದೆ. ಈ ವರ್ಷದ ಅಂತ್ಯದೊಳಗೆ ಸಂಪೂರ್ಣ ಹೊಸ ಸಂಗ್ರಹವನ್ನು ಪರಿಚಯಿಸುವ ನಿರೀಕ್ಷೆಯಿದೆ.

ಹ್ಯಾಂಡ್ಸ್-ಫ್ರೀ ಫೋನ್‌ ಬಳಕೆ

ಈ ಹೊಸ ಸ್ಮಾರ್ಟ್‌ ಗ್ಲಾಸ್‌ಗಳನ್ನು ಸ್ಮಾರ್ಟ್‌ಫೋನ್‌ಗೆ ಸಂಪರ್ಕ ಹೊಂದುವ ಕಂಪ್ಯಾನಿಯನ್‌ ಡಿವೈಸ್‌ ಆಗಿ ವಿನ್ಯಾಸಗೊಳಿಸಲಾಗಿದೆ. ಇದರ ಮೂಲಕ ಬಳಕೆದಾರರು ಫೋನ್‌ ಕೈಗೆತ್ತಿಕೊಳ್ಳದೆ ನೇರವಾಗಿ ಮೆಸೆಜ್‌ ಕಳುಹಿಸುವುದು, ಕರೆ ಸ್ವೀಕರಿಸುವುದು ಹಾಗೂ ನೋಟಿಫಿಕೇಶನ್‌ಗಳ ಸಾರಾಂಶವನ್ನು ನೋಡಬಹುದಾಗಿದೆ. ಗೂಗಲ್‌ ತಿಳಿಸಿರುವಂತೆ, ಈ ಗ್ಲಾಸ್‌ಗಳಲ್ಲಿ ಖಾಸಗಿ ಓವರ್‌-ಇಯರ್‌ ಸ್ಪೀಕರ್‌ಗಳಿದ್ದು, ಸಂಗೀತ ಕೇಳುವುದು, ಕರೆಗಳು ಮತ್ತು ಆಡಿಯೊ ಪ್ಲೇಬ್ಯಾಕ್‌ಗಾಗಿ ಬಳಸಬಹುದು.

ಹಾಗೆಯೇ ರಿಯಲ್‌-ಟೈಮ್‌ ಟ್ರಾನ್ಸಲೇಟ್‌ ಸೌಲಭ್ಯವೂ ಇರಲಿದೆ. ಬಳಕೆದಾರರು ಮಾತನಾಡುವ ಸಂಭಾಷಣೆಗಳನ್ನು ಮೂಲ ಧ್ವನಿಯ ಶೈಲಿ ಮತ್ತು ಟೋನ್‌ಗೆ ಹೊಂದುವಂತೆ ತಕ್ಷಣವೇ ಅನುವಾದಿಸಲು ಇದು ನೆರವಾಗುತ್ತದೆ. ರೆಸ್ಟೋರೆಂಟ್‌ ಮೆನುಗಳು, ರಸ್ತೆ ಚಿಹ್ನೆಗಳು ಅಥವಾ ಬೇರೆ ಟೆಕ್ಸ್ಟ್‌ಗಳನ್ನು ಗ್ಲಾಸ್‌ ಮೂಲಕ ನೇರವಾಗಿ ಅನುವಾದಿಸಿ ನೋಡಬಹುದಾಗಿದೆ.

ಬಳಕೆದಾರರು ‘Hey Google’ ಎಂದು ಹೇಳುವುದರ ಮೂಲಕ ಅಥವಾ ಗ್ಲಾಸ್‌ನ ಬದಿಯನ್ನು ಟ್ಯಾಪ್ ಮಾಡುವ ಮೂಲಕ ಜೆಮಿನಿ AI ಅನ್ನು ಸಕ್ರಿಯಗೊಳಿಸಬಹುದು. ನಂತರ AI ಸಹಾಯಕವು ಸುತ್ತಮುತ್ತಲಿನ ಪರಿಸರವನ್ನು ವಿಶ್ಲೇಷಿಸಿ, ವಸ್ತುಗಳು ಮತ್ತು ಸ್ಥಳಗಳ ಬಗ್ಗೆ ಮಾಹಿತಿ ನೀಡುವುದು ಮಾತ್ರವಲ್ಲದೆ ದೈನಂದಿನ ಕೆಲಸಗಳಲ್ಲೂ ಸಹಾಯ ಮಾಡುತ್ತದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :