ಜನಪ್ರಿಯ Apple ಕಂಪನಿಯು ನಾಳೆ (ಸೆಪ್ಟೆಂಬರ್ 9 ರಂದು) Surprise and Shine ಹೆಸರಿನ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ iPhone 18 Pro ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್, ಆಪಲ್ ಫೋಲ್ಡೆಬಲ್ ಫೋನ್ ಸೇರಿದಂತೆ ಆಪಲ್ ವಾಚ್ ಸರಣಿ 12 ಮತ್ತು ವಾಚ್ ಅಲ್ಟ್ರಾ 4 ಡಿವೈಸ್ಗಳನ್ನು ಲಾಂಚ್ ಮಾಡುವ ಸಾಧ್ಯತೆಗಳು ಇವೆ. ಬಿಡುಗಡೆಗೂ ಮುನ್ನವೇ ಈ ಫೋನ್ಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅಲ್ಲದೇ ಈ ಫೋನ್ಗಳ ನಿರೀಕ್ಷಿತ ಬೆಲೆಯ ಬಗ್ಗೆಯೂ ಗ್ರಾಹಕರಲ್ಲಿ ಕುತೂಹಲ ಅಧಿಕವಾಗಿದೆ. ಆದರೆ ಆಪಲ್ ಕಂಪನಿಯು ಇನ್ನೂ ಬೆಲೆಗಳ ಬಗ್ಗೆ ಅಧಿಕೃತವಾಗಿ ಖಚಿತಪಡಿಸಿಲ್ಲ ಎಂಬುದನ್ನು ಗಮನಿಸುವುದು ಅಗತ್ಯ. ಹಾಗಾದರೇ ಆಪಲ್ನ ಮುಂಬರುವ ಫೋನ್ಗಳ ನಿರೀಕ್ಷಿತ ಬೆಲೆ ಹಾಗೂ ಇನ್ನಿತರ ಮಾಹಿತಿ ಮುಂದೆ ನೋಡೋಣ.
Also Read : Apple Launch Event 2026: ಈ ಕಾರ್ಯಕ್ರಮದ ಲೈವ್ ವೀಕ್ಷಣೆ ಹೇಗೆ? ನಿರೀಕ್ಷೆಗಳೇನು? ಇಲ್ಲಿದೆ ಮಾಹಿತಿ
iPhone 18 Pro ಸರಣಿಯ ಭಾರತದ ಬೆಲೆಯನ್ನು ಆಪಲ್ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಸದ್ಯದ ಲೀಕ್ ಮಾಹಿತಿಗಳ ವರದಿಗಳ ಪ್ರಕಾರ ಐಫೋನ್ 18 ಪ್ರೊ ಬೆಲೆ ಸುಮಾರು 1.34 ಲಕ್ಷದಿಂದ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಐಫೋನ್ 18 ಪ್ರೊ ಮ್ಯಾಕ್ಸ್ ಫೋನಿನ ಬೆಲೆ 1.55 ಲಕ್ಷದಿಂದ 1.70 ಲಕ್ಷದ ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಹಾಗೆಯೇ ಆಪಲ್ನ ಫೋಲ್ಡೆಬಲ್ ಐಫೋನ್ ಬೆಲೆ 2 ಲಕ್ಷಕ್ಕಿಂತ ಹೆಚ್ಚಿರಬಹುದು ಎಂದು ಕೆಲವು ವರದಿಗಳು ಸೂಚಿಸಿವೆ.
ಆಪಲ್ ಕಂಪನಿಯ Surprise and Shine ಕಾರ್ಯಕ್ರಮವು ನಾಳೆ (ಸೆಪ್ಟೆಂಬರ್ 9 ರಂದು) ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಕಂಪನಿಯ ಕ್ಯಾಂಪಸ್ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಭಾರತೀಯ ಕಾಲಮಾನ ರಾತ್ರಿ 10:30ಕ್ಕೆ ಆರಂಭವಾಗಲಿದೆ. ಆಸಕ್ತ ಗ್ರಾಹಕರು ಈ ಕಾರ್ಯಕ್ರಮವನ್ನು ಆಪಲ್ನ ಅಧಿಕೃತ YouTube ಚಾನೆಲ್, Apple TV ಆಪ್ ಹಾಗೂ ಕಂಪನಿಯ ಅಧಿಕೃತ ವೆಬ್ಸೈಟ್ ಮೂಲಕ ಕಾರ್ಯಕ್ರಮವನ್ನು ಲೈವ್ ಆಗಿ ವೀಕ್ಷಿಸಬಹುದು.
ಈ ವರ್ಷದ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಎರಡೂ ಫೋನ್ಗಳು ಪ್ರಸ್ತುತ ಪ್ರೊ ಮಾದರಿಗಳ ವಿನ್ಯಾಸ ಮತ್ತು ಡಿಸ್ಪ್ಲೇ ಗಾತ್ರವನ್ನು ಬಹುತೇಕ ಉಳಿಸಿಕೊಂಡು, ಹಲವು ಹೊಸ ಅಪ್ಗ್ರೇಡ್ಗಳೊಂದಿಗೆ ಬರಬಹುದು ಎನ್ನಲಾಗಿದೆ. ಕಾರ್ಯಕ್ಷಮತೆಯ ವಿಚಾರದಲ್ಲಿ ಆಪಲ್ ತನ್ನ ಪ್ರೊ ಮಾದರಿಗಳಿಗೆ 2nm ಪ್ರೊಸೆಸ್ ಆಧಾರಿತ A20 Pro ಚಿಪ್ ಬಳಸಬಹುದು ಎಂಬ ವರದಿಗಳಿವೆ. ಹಾಗೆಯೇ Dynamic Island ನ ಗಾತ್ರವನ್ನು ಮತ್ತಷ್ಟು ಕಡಿಮೆ ಮಾಡುವುದು, ವೇರಿಯಬಲ್-ಅಪರ್ಚರ್ ಕ್ಯಾಮೆರಾ ಮತ್ತು ಕ್ಯಾಮೆರಾ ಕಂಟ್ರೋಲ್ ಬಟನ್ನಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸಿವೆ.
ಆಪಲ್ ಕಂಪನಿಯು ನೂತನ ಐಫೋನ್ ಸರಣಿಯ ಜೊತೆಗೆ ಹೊಸ ಆಪಲ್ ವಾಚ್ ಸರಣಿ 12 ಮತ್ತು ಆಪಲ್ ವಾಚ್ ಅಲ್ಟ್ರಾ 4 ಮಾದರಿಗಳನ್ನೂ ಆಪಲ್ ಪರಿಚಯಿಸಬಹುದು ಎನ್ನಲಾಗಿದೆ. ಆಪಲ್ ವಾಚ್ ಸರಣಿ 12 ನಲ್ಲಿ ಸೆರಾಮಿಕ್ ಕೇಸ್, ಹೊಸ ಬಣ್ಣಗಳ ಆಯ್ಕೆ ಮತ್ತು ಹೆಚ್ಚುವರಿ ಆರೋಗ್ಯ ಸಂಬಂಧಿತ ಫೀಚರ್ಗಳು ಸಿಗುವ ಸಾಧ್ಯತೆಯಿದೆ. ಮತ್ತೊಂದೆಡೆ, ಆಪಲ್ ವಾಚ್ ಅಲ್ಟ್ರಾ 4 ನಲ್ಲಿ ವಿನ್ಯಾಸ ಹಾಗೂ ಸೆನ್ಸರ್ಗಳಲ್ಲಿ ಕೆಲವು ಅಪ್ಗ್ರೇಡ್ಗಳನ್ನು ಮಾಡು ಸಾಧ್ಯತೆಗಳು ಇವೆ.