Google Search Down: ಇಂದು (ಮೇ 12 ರಂದು) ಜಗತ್ತಿನ ಅತಿ ದೊಡ್ಡ ಸರ್ಚ್ ಎಂಜಿನ್ ಆಗಿರುವ Google ಕೆಲವು ಸಮಯದವರೆಗೆ ತಾಂತ್ರಿಕ ಸಮಸ್ಯೆಯನ್ನು ಎದುರಿಸಿತು. ಗೂಗಲ್‌ನಲ್ಲಿ ಸರ್ಚ್‌ನಲ್ಲಿ ಮಾಡಲು ಪ್ರಯತ್ನಿಸಿದ ಅನೇಕ ಬಳಕೆದಾರರಿಗೆ ಆಂತರೀಕ ಸರ್ವರ್ ಎರರ್ ಅಥವಾ ಸರ್ವರ್ ಎರರ್ ಎಂಬ ಮೆಸೆಜ್‌ಗಳು ಕಾಣಿಸಿಕೊಂಡವು. ಇದರಿಂದ ಗೂಗಲ್ ಸರ್ಚ್ ಸೇವೆಗಳು ಹಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು ಎಂದು ವರದಿಯಾಗಿದೆ. ಗೂಗಲ್ ಸರ್ವ್ ಡೌನ್ ಆಗಿರುವ ಬಗ್ಗೆ ಅನೇಕ ಬಳಕೆದಾರರು ಎಕ್ಸ್ ಖಾತೆಯಲ್ಲಿ ವರದಿ ಮಾಡಿದ್ದಾರೆ.
ಮುಂಜಾನೆಯಿಂದಲೇ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯೆಯ ಬಗ್ಗೆ ಪೋಸ್ಟ್ ಮಾಡತೊಡಗಿದರು. ಗೂಗಲ್ ಮೇನ್‌ಪೇಜ್ ಸಾಮಾನ್ಯವಾಗಿ ತೆರೆಯುತ್ತಿದ್ದರೂ, ಸರ್ಚ್ ಪಟ್ಟಿಯಲ್ಲಿ ಪ್ರಶ್ನೆ ನಮೂದಿಸಿದ ನಂತರ ಫಲಿತಾಂಶಗಳು ಕಾಣಿಸದೇ ಇದ್ದವು ಎಂದು ಹಲವರು ತಿಳಿಸಿದ್ದಾರೆ. ಬದಲಾಗಿ ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸುವಾಗ ಆಂತರಿಕ ಸರ್ವರ್ ದೋಷ ಸಂಭವಿಸಿದೆ. ನಮ್ಮ ಎಂಜಿನಿಯರ್‌ಗಳು ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದಾರೆ ಎಂಬ ಮೆಸಜ್‌ಗಳು ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡಿವೆ ಎಂದು ವರದಿಗಳಾಗಿವೆ.
ಈ ತಾಂತ್ರಿಕ ಸಮಸ್ಯೆ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅಮೆರಿಕಾ ಸೇರಿದಂತೆ ಹಲವು ದೇಶಗಳ ಬಳಕೆದಾರರೂ ಇದೇ ರೀತಿಯ ಸಮಸ್ಯೆ ಎದುರಿಸಿದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವರಿಗೆ ಕೆಲವು ನಿಮಿಷಗಳಲ್ಲೇ ಗೂಗಲ್ ಸೇವೆಗಳು ಸಾಮಾನ್ಯ ಸ್ಥಿತಿಗೆ ಮರಳಿದರೂ, ಇನ್ನೂ ಕೆಲವು ಬಳಕೆದಾರರಿಗೆ ಸಮಸ್ಯೆ ಮುಂದುವರಿದಿದೆ. ವಿಶ್ವದ ಕೋಟ್ಯಂತರ ಜನರು ಪ್ರತಿದಿನ ಬಳಸುವ ಗೂಗಲ್ ಸೇವೆಯಲ್ಲಿ ಉಂಟಾದ ಈ ತಾತ್ಕಾಲಿಕ ವ್ಯತ್ಯಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳು ಹರಿದಾಡುವಂತೆ ಮಾಡಿದೆ.