ಭಾರತೀಯ ಸಿನಿಮಾ ಮತ್ತು ಗೇಮಿಂಗ್ ಜಗತ್ತುಗಳು ಇದೀಗ ಹೊಸ ಮಟ್ಟದಲ್ಲಿ ಒಂದಾಗಿವೆ. ದೇಶದ ಜನಪ್ರಿಯ ಮೊಬೈಲ್ ಗೇಮ್‌ಗಳಲ್ಲಿ ಒಂದಾದ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಇದೀಗ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ Toxic (ಟಾಕ್ಸಿಕ್) ಜೊತೆಗೆ ಅಧಿಕೃತ ಸಹಯೋಗ ಘೋಷಿಸಿದೆ. BGMI ಯ ಹೊಸ 4.4 ಅಪ್‌ಡೇಟ್‌ನ ಭಾಗವಾಗಿ ಈ ಸ್ಪೆಷಲ್ ಸಹಯೋಗವನ್ನು ಪರಿಚಯಿಸಲಾಗಿದ್ದು, ಇದರ ಪ್ರಮುಖ ಹೈಲೈಟ್ ಆಗಿ ನಟ ಯಶ್ x BGMI: ದಿ ಟಾಕ್ಸಿಕ್ ವಾಯ್ಸ್ ಪ್ಯಾಕ್ ಬಿಡುಗಡೆ ಮಾಡಲಾಗಿದೆ.
Also Read : ಅಗ್ಗದ ದರದ Moto g06 Power ಮೊಬೈಲ್ ಈಗ ಇನ್ನಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ!
BGMI ಇತಿಹಾಸದಲ್ಲೇ ಅತಿದೊಡ್ಡ ಸೆಲೆಬ್ರಿಟಿ ಸಹಯೋಗಗಳಲ್ಲಿ ಒಂದೆಂದು ಈ ಪ್ರಾಜೆಕ್ಟ್‌ನ್ನು ಪರಿಗಣಿಸಲಾಗುತ್ತಿದೆ. ಈ ಸಹಯೋಗವನ್ನು ಎರಡು ಹಂತಗಳಲ್ಲಿ ಪರಿಚಯಿಸಲಾಗುತ್ತಿದೆ. ಮೊದಲ ಹಂತವಾಗಿ ಟಾಕ್ಸಿಕ್ ಎಕ್ಸ್‌ಚೇಂಜ್ ಈವೆಂಟ್ ಆರಂಭವಾಗಿದ್ದು, ಆಟಗಾರರು ಪ್ರತಿದಿನದ ಟಾಸ್ಕ್‌ಗಳನ್ನು ಪೂರ್ಣಗೊಳಿಸುವ ಮೂಲಕ ಹಲವು ವಿಶೇಷ ಇನ್-ಗೇಮ್ ಬಹುಮಾನಗಳನ್ನು ಪಡೆಯಬಹುದು.
ಈ ಬಹುಮಾನಗಳಲ್ಲಿ ಟಾಕ್ಸಿಕ್ ಡ್ಯಾಡಿ ಟ್ರೆಂಚ್‌ಕೋಟ್, ಟಾಕ್ಸಿಕ್ ಪ್ಯಾರಾಚೂಟ್, ವಿಶೇಷ ಅವತಾರ್‌ಗಳು, ಅವತಾರ್ ಫ್ರೇಮ್‌ಗಳು ಸೇರಿದಂತೆ ಹಲವು ಥೀಮ್ ಆಧಾರಿತ ಸಂಗ್ರಹ ವಸ್ತುಗಳು ಸೇರಿವೆ. ಇದಲ್ಲದೆ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸೀಮಿತ ಅವಧಿಯ ವಾಯ್ಸ್ ಪ್ಯಾಕ್‌ಗಳನ್ನೂ ಆಟಗಾರರಿಗೆ ನೀಡಲಾಗುತ್ತಿದೆ. ಯಶ್ ಅವರ ಧ್ವನಿಯಲ್ಲಿ ಕೇಳಿಬರುವ ಡೈಲಾಗ್‌ಗಳು ಗೇಮಿಂಗ್ ಅನುಭವವನ್ನು ಇನ್ನಷ್ಟು ಸಿನಿಮೀಯವಾಗಿ ಮಾಡಲಿವೆ.
ಈ ಸಹಯೋಗದ ಎರಡನೇ ಹಂತ ಜೂನ್ 2 ರಂದು ಆರಂಭವಾಗಲಿದೆ. ಆ ದಿನ ಟಾಕ್ಸಿಕ್ ವಾಯ್ಸ್ ಪ್ಯಾಕ್ ಕ್ರೇಟ್ ಬಿಡುಗಡೆಗೊಳ್ಳಲಿದ್ದು, ಆಟಗಾರರು BGMI ಪಂದ್ಯಗಳ ವೇಳೆ ಯಶ್ ಅವರ ಸಿಗ್ನೇಚರ್ ವಾಯ್ಸ್ ಅನ್ನು ಬಳಕೆ ಮಾಡುವ ಅವಕಾಶ ಪಡೆಯಲಿದ್ದಾರೆ. ಇದರಿಂದ ಗೇಮಿಂಗ್ ಅನುಭವ ಮತ್ತಷ್ಟು ವಿಭಿನ್ನ ಮತ್ತು ರೋಚಕವಾಗಲಿದೆ.
ಈ ಸಹಯೋಗದ ಬಗ್ಗೆ ಮಾತನಾಡಿದ ಯಶ್, ಇಂದಿನ ಜೆನ್ Z ಪ್ರೇಕ್ಷಕರು ಹೊಸ ಅನುಭವಗಳು ಮತ್ತು ವಿಭಿನ್ನ ಮನರಂಜನೆಗೆ ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ಹೇಳಿದರು. ಟಾಕ್ಸಿಕ್ ಚಿತ್ರದ ವೈಬ್ ಮತ್ತು BGMI ಗೇಮಿಂಗ್ ಜಗತ್ತು ಒಂದಕ್ಕೊಂದು ತುಂಬಾ ಹೊಂದಿಕೆಯಾಗುತ್ತದೆ. ಗೇಮಿಂಗ್ ಸಮುದಾಯದ ಉತ್ಸಾಹ ನನಗೆ ತುಂಬಾ ಇಷ್ಟವಾಯಿತು. ನನ್ನ ವಾಯ್ಸ್ ಮತ್ತು ಸಿನಿಮಾದ ಮೂಲಕ ಯುವ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವುದು ಖುಷಿಯ ಸಂಗತಿ ಎಂದು ಅವರು ಹೇಳಿದರು.
ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. KVN ಪ್ರೊಡಕ್ಷನ್ಸ್ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. ಈ ಬಹುಭಾಷಾ ಆಕ್ಷನ್ ಡ್ರಾಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.