ಬ್ಯಾಂಕ್ ಆಫ್ ಬರೋಡಾ ಮತ್ತು ರಿಲಯನ್ಸ್ ಜಿಯೋ ಇಂದು ಫೀಚರ್ ಫೋನ್‌ಗಳಿಗೆ ಬಿಒಬಿ ವರ್ಲ್ಡ್ ಲೈಟ್ (Bob World Lite App) ಎಂಬ ಸಮಗ್ರ ಮೊಬೈಲ್ ಬ್ಯಾಂಕಿಂಗ್ ಆಪ್ ಬಿಡುಗಡೆ ಮಾಡಿವೆ. ಈ ಆಪ್ ಅನ್ನು ವಿಶೇಷವಾಗಿ ಫೀಚರ್ ಫೋನ್ ಬಳಕೆದಾರರ ಅನುಕೂಲಕ್ಕಾಗಿ ತಯಾರಿಸಲಾಗಿದೆ. ಕೀಪ್ಯಾಡ್ ಇರುವ ಜಿಯೋಫೋನ್ ಪ್ರೈಮಾ 4G ಮೊಬೈಲ್‌ನಲ್ಲಿ ಈ ಬಿಒಬಿ ವರ್ಲ್ಸ್ ಲೈಟ್ ಮೊಬೈಲ್ ಬ್ಯಾಂಕಿಂಗ್ ಆಪ್ ಲಭ್ಯವಿದೆ. ಭಾರತ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ದೇಶದಲ್ಲಿ ಡಿಜಿಟಲ್ ಪೇಮೆಂಟ್‌ಗಳನ್ನು ಉತ್ತೇಜಿಸುತ್ತಿದ್ದು, ಈ ನಿಟ್ಟಿನಲ್ಲಿ ಈ ಬಿಒಬಿ ವರ್ಲ್ಡ್ ಲೈಟ್ ನಿಂದ ಫೀಚರ್ ಫೋನ್ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಆಗಲಿದೆ. ದೇಶಾದ್ಯಂತ ಜಿಯೋ ಫೋನ್ ಬಳಕೆದಾರರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವಾ ಸೌಲಭ್ಯಗಳನ್ನು ಪಡೆಯಲು ನೆರವಾಗಲಿದೆ.
Also Read : ಕಡಿಮೆ ಬೆಲೆಯಲ್ಲಿ ಲಾಂಚ್ ಆಯ್ತು Redmi A7 Pro 5G ಸ್ಮಾರ್ಟ್‌ಫೋನ್! ಫೀಚರ್ಸ್ ಹೀಗಿವೆ
ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರ ಮೊಬೈಲ್ ಬ್ಯಾಂಕಿಂಗ್ ಆಪ್‌ಗಳು ಕಾರ್ಯ ನಿರ್ವಹಿಸುತ್ತವೆ. ಆದರೆ ಬಿಒಬಿ ವರ್ಲ್ಡ್ ಲೈಟ್ ಆಪ್ ಮೂಲಕ ಫೀಚರ್ ಫೋನ್ ಗಳಲ್ಲಿಯೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಫೀಚರ್ ಫೋನ್ ಬಳಸುವವರಿಗೆ ಇದು ಹೆಚ್ಚಿನ ಅನುಕೂಲಕರವಾಗಿದೆ.
ಬಿಒಬಿ ವರ್ಲ್ಡ್ ಲೈಟ್ ಮೊಬೈಲ್ ಬ್ಯಾಂಕಿಂಗ್ ಆಪ್ ನಲ್ಲಿ ಫೀಚರ್ ಫೋನ್ ಬಳಕೆದಾರರು, ಯುಪಿಐ ಆಧರಿತ ಸ್ಕ್ಯಾನ್ ಮತ್ತು ಪೇ, ಹಣ ರವಾನೆ, ಬಿಲ್ ಪಾವತಿ, ರಿಚಾರ್ಜ್, ಪ್ರೊಫೈಲ್ ನಿರ್ವಹಣೆ ಇತ್ಯಾದಿ ಸೇವೆಗಳನ್ನು ಪಡೆಯಬಹುದು. ಬಿಒಬಿ ವರ್ಲ್ಸ್ ಲೈಟ್ ಆಪ್, ಜಿಯೋಫೋನ್ ಪ್ರೈಮಾ 4ಜಿ ಫೀಚರ್ ಫೋನ್ ನಲ್ಲಿ ಪ್ರಿ-ಲೋಡೆಡ್ ಆಗಿರುತ್ತದೆ. ಹೋಮ್ ಸ್ಕ್ರೀನ್ ನಿಂದ ನೇರವಾಗಿ ಪ್ರವೇಶ ಪಡೆಯಬಹುದು. ಹಾಲಿ ಬಳಕೆದಾರರು ಬಿಒಬಿ ವರ್ಲ್ಡ್ ಲೈಟ್ ಆಪ್ ಅನ್ನು ಜಿಯೋ ಸ್ಟೋರ್ ಮೂಲಕ ಪಡೆಯಬಹುದು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ನಿರ್ದೇಶಕ ಮತ್ತು ಸಿಇಒ ಡಾ. ದೇಬದತ್ತ ಚಂದ್ ಅವರು, ಜಿಯೋ ಜತೆಗೆ ಸಹಭಾಗಿತ್ವದಿಂದ ಬಿಒಬಿ ವರ್ಲ್ಡ್ ಲೈಟ್ ಬಿಡುಗಡೆಯಾಗುತ್ತಿದ್ದು ಡಿಜಿಟಲ್ ಬ್ಯಾಂಕಿಂಗ್ ವಿಸ್ತರಣೆಯ ನಿಟ್ಟಿನಲ್ಲಿ ಬಹು ದೊಡ್ಡ ಹೆಜ್ಜೆಯಾಗಿದೆ ಎಂದರು. ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ನ ಅಧ್ಯಕ್ಷ ಡಾ. ಸುನಿಲ್ ದತ್ ಅವರು ಮಾತನಾಡಿ, ಪ್ರತಿಯೊಬ್ಬ ಭಾರತೀಯರಿಗೂ ಡಿಜಿಟಲ್ ಸೇವೆಗಳು ಮುಟ್ಟಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದ್ದು ಜಿಯೋಫೋನ್ ಈ ಉದ್ದೇಶವನ್ನು ಈಡೇರಿಸುತ್ತಿದೆ ಎಂದರು.