108MP vs 200MP: ಅತ್ಯುತ್ತಮ ಫೋಟೋ ಸೆರೆಹಿಡಿಯಲು ಯಾವ ಕ್ಯಾಮೆರಾ ಉತ್ತಮ? ಇಲ್ಲಿದೆ ಮಾಹಿತಿ

108MP vs 200MP: ಸ್ಮಾರ್ಟ್‌ಫೋನ್ ಖರೀದಿಸುವಾಗ ಕ್ಯಾಮೆರಾ ಬಗ್ಗೆ ಗಮನಿಸುವ ಬಹುತೇಕ ಗ್ರಾಹಕರ ಕಣ್ಣಿಗೆ ಮೊದಲು ಕಾಣಿಸುವುದು ಅದರ ಮೆಗಾಪಿಕ್ಸೆಲ್ ಮೇಲೆಯೇ. ಮೊಬೈಲ್‌ ಕಂಪನಿಗಳು 108MP ಕ್ಯಾಮೆರಾ, 200MP ಕ್ಯಾಮೆರಾ ಎಂದು ಜಾಹೀರಾತು ಮಾಡುವುದನ್ನು ನಾವು ನೋಡುತ್ತೇವೆ. ಸಹಜವಾಗಿಯೇ 200MP ಕ್ಯಾಮೆರಾ ಎಂದರೆ 108MP ಗಿಂತ ಉತ್ತಮ ಫೋಟೋ ತೆಗೆಯುತ್ತದೆ ಎಂಬ ಭಾವನೆ ಮೂಡುತ್ತದೆ. ಆದರೆ ವಾಸ್ತವದಲ್ಲಿ ಕ್ಯಾಮೆರಾದ ಗುಣಮಟ್ಟವನ್ನು ನಿರ್ಧರಿಸುವುದು ಮೆಗಾಪಿಕ್ಸೆಲ್ ನಂಬರ್ ಮಾತ್ರವಲ್ಲ. ಸೆನ್ಸರ್ ಗಾತ್ರ, ಪಿಕ್ಸೆಲ್ ಗಾತ್ರ, ಲೆನ್ಸ್ ಗುಣಮಟ್ಟ, ಇಮೇಜ್ ಪ್ರೊಸೆಸಿಂಗ್, OIS ಮತ್ತು ಬೆಳಕಿನ ಪರಿಸ್ಥಿತಿ ಸೇರಿದಂತೆ ಹಲವು ಅಂಶಗಳು ಫೋಟೋದ ಗುಣಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾದರೆ 108MP ಮತ್ತು 200MP ಕ್ಯಾಮೆರಾಗಳ ನಡುವೆ ನಿಜವಾದ ವ್ಯತ್ಯಾಸವೇನು? ಯಾವುದು ಬೆಸ್ಟ್‌ ಮುಂದೆ ತಿಳಿಯೋಣ.

Also Read : ಹೊಸ Realme C100i ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯ; ಅಗ್ಗದ ಪ್ರೈಸ್‌ಟ್ಯಾಗ್‌

108MP ಮತ್ತು 200MP ಭಿನ್ನತೆ ಮಾಹಿತಿ?

ಒಂದು ಮೆಗಾಪಿಕ್ಸೆಲ್‌ನಲ್ಲಿ ಸುಮಾರು 10 ಲಕ್ಷ ಪಿಕ್ಸೆಲ್‌ಗಳಿರುತ್ತವೆ. ಹೀಗಾಗಿ 108MP ಕ್ಯಾಮೆರಾ ಸೆನ್ಸರ್ ಸಿದ್ಧಾಂತದ ಪ್ರಕಾರ 200MP ಕ್ಯಾಮೆರಾಗಿಂತ ಕಡಿಮೆ ರೆಸಲ್ಯೂಶನ್ ಹೊಂದಿರುತ್ತದೆ. ಸರಳವಾಗಿ ಹೇಳುವುದಾದರೆ 108MP ಕ್ಯಾಮೆರಾ ಒಂದು ಫೋಟೋದಲ್ಲಿ ಸುಮಾರು 108 ಮಿಲಿಯನ್ ಪಿಕ್ಸೆಲ್‌ಗಳಷ್ಟು ಡೇಟಾವನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿರುತ್ತದೆ. 200MP ಕ್ಯಾಮೆರಾ ಸುಮಾರು 200 ಮಿಲಿಯನ್ ಪಿಕ್ಸೆಲ್‌ಗಳಷ್ಟು ಡೇಟಾವನ್ನು ಸೆರೆಹಿಡಿಯಬಹುದು. ಇದರಿಂದ 200MP ಕ್ಯಾಮೆರಾ ಹೆಚ್ಚು ವಿವರಗಳನ್ನು ದಾಖಲಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಬಹುದು.

200MP ಕ್ಯಾಮೆರಾ ಯಾವಾಗ ಹೆಚ್ಚು ಪ್ರಯೋಜನಕಾರಿ?

200MP ಕ್ಯಾಮೆರಾದ ದೊಡ್ಡ ಪ್ರಯೋಜನವೆಂದರೆ ಹೆಚ್ಚಿನ ರೆಸಲ್ಯೂಶನ್. ಉತ್ತಮ ಬೆಳಕಿನಲ್ಲಿ 200MP ಮೋಡ್ ಬಳಸಿದಾಗ ಫೋಟೋದಲ್ಲಿ ಹೆಚ್ಚಿನ ಸೂಕ್ಷ್ಮ ವಿವರಗಳನ್ನು ದಾಖಲಿಸಲು ಸಾಧ್ಯವಾಗಬಹುದು. ಉದಾಹರಣೆಗೆ, ದೂರದಲ್ಲಿರುವ ಕಟ್ಟಡ, ಬೋರ್ಡ್ ಅಥವಾ ಪ್ರಕೃತಿ ದೃಶ್ಯವನ್ನು ಫೋಟೋ ತೆಗೆದ ನಂತರ ಅದರ ಒಂದು ಭಾಗವನ್ನು ಕ್ರಾಪ್‌ ಮಾಡಲು ಬಯಸಿದರೆ ಹೆಚ್ಚಿನ ರೆಸಲ್ಯೂಶನ್ ಸಹಾಯ ಮಾಡಬಹುದು.

108MP ಕ್ಯಾಮೆರಾ ಉತ್ತಮವೇ?

ಒಂದು ಉತ್ತಮ ಗುಣಮಟ್ಟದ 108MP ಸೆನ್ಸರ್, ಉತ್ತಮ ಲೆನ್ಸ್ ಮತ್ತು ಉತ್ತಮ image processing ಹೊಂದಿದ್ದರೆ ಅದು ಕಳಪೆ 200MP ಕ್ಯಾಮೆರಾಗಿಂತ ಉತ್ತಮ ಫೋಟೋ ನೀಡಬಹುದು. ಉದಾಹರಣೆಗೆ- ಎರಡು ಫೋನ್‌ಗಳಲ್ಲಿ ಒಂದರಲ್ಲಿ 108MP ಕ್ಯಾಮೆರಾ ಮತ್ತು ಮತ್ತೊಂದರಲ್ಲಿ 200MP ಕ್ಯಾಮೆರಾ ಇದೆ ಎಂದುಕೊಳ್ಳಿ. 108MP ಫೋನ್‌ನಲ್ಲಿ ದೊಡ್ಡ ಸೆನ್ಸರ್, ಉತ್ತಮ OIS ಮತ್ತು ಉತ್ತಮ HDR processing ಇದ್ದರೆ, ಅದು ಕಡಿಮೆ ಬೆಳಕಿನಲ್ಲಿ ಹೆಚ್ಚು ನೈಸರ್ಗಿಕ ಮತ್ತು ಸ್ಪಷ್ಟವಾದ ಫೋಟೋವನ್ನು ನೀಡಬಹುದು.

ಯಾವುದು ಉತ್ತಮ?

108MP vs 200MP ಎಂಬ ಪ್ರಶ್ನೆಗೆ ತಮ್ಮ ವರ್ಗದಲ್ಲೇ ಎರಡೂ ಉತ್ತಮವೇ ಎನ್ನಬಹುದು. ನೀವು ಸಾಮಾನ್ಯವಾಗಿ WhatsApp, Instagram ಅಥವಾ Facebook ನಲ್ಲಿ ಹಂಚಿಕೊಳ್ಳಲು ಫೋಟೋ ತೆಗೆದುಕೊಳ್ಳುತ್ತಿದ್ದರೆ 108MP ಕ್ಯಾಮೆರಾ ಸಾಕಷ್ಟು ಉತ್ತಮವಾಗಿರಬಹುದು. ದಿನನಿತ್ಯದ ಫೋಟೋಗಳಲ್ಲಿ ಕ್ಯಾಮೆರಾದ software processing ಮತ್ತು HDR ಫಲಿತಾಂಶವು ಮೆಗಾಪಿಕ್ಸಲ್‌ ಸಂಖ್ಯೆಯಷ್ಟೇ ಮುಖ್ಯವಾಗಿರುತ್ತದೆ. ಮತ್ತೊಂದೆಡೆ ಉತ್ತಮ ಬೆಳಕಿನಲ್ಲಿ ಹೆಚ್ಚು ವಿವರಗಳಿರುವ ಫೋಟೋಗಳನ್ನು ತೆಗೆದುಕೊಳ್ಳಲು ಮತ್ತು ನಂತರ ಅವುಗಳನ್ನು ಕ್ರಾಪ್ ಮಾಡಲು ಬಯಸುವವರಿಗೆ 200MP ಕ್ಯಾಮೆರಾ ಉಪಯುಕ್ತವಾಗಬಹುದು.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :